- ಚೇತನ ಶಿವಶಿಂಪಿ
ಮುದ್ದೇಬಿಹಾಳ: ದಿನಬಳಕೆಯ, ಐಶಾರಾಮಿ ವಸ್ತುಗಳು ಸೇರಿದಂತೆ ವಾಹನಗಳ ಬೆಲೆಗಳು ಗಗನಕ್ಕೇರಿರುವದನ್ನು ನಾವು ನೀವೆಲ್ಲ ಕಂಡಿದ್ದೇವೆ. ಆದರೆ ಸಾಕು ಪ್ರಾಣಿಗಳ ಬೆಲೆಗಳು ಕೂಡ ಮೂರು ಪಟ್ಟು ಹೆಚ್ಚಾಗಿರುವುದು ರೈತರಿಗೆ ಖುಷಿ ತಂದಿದೆ.
ಹೌದು, ಇಲ್ಲೊಂದು ಹೋರಿ ಬರೊಬ್ಬರಿ ರೂ.೫.೧೦ ಲಕ್ಷಕ್ಕೆ ಮಾರಾಟವಾಗಿ ರಾಜ್ಯದ ಗಮನ ಸೆಳೆದಿದೆ.
ಮುದ್ದೇಬಿಹಾಳ ತಾಲೂಕಿನ ಚೊಂಡಿ ಗ್ರಾಮದ ಹೋರಿ ಇಷ್ಟೊಂದು ಬೆಲೆಗೆ ಮಾರಾಟವಾಗಿ ರಾಜ್ಯದ ರೈತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.
ಸಾಮಾನ್ಯವಾಗಿ ಕಟ್ಟುಮಸ್ತಾದ ಒಂದು ಹೋರಿ ೪೦ ಸಾವಿರದಿಂದ ೧ ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತದೆ. ಅಬ್ಬಬ್ಬಾ ಅಂದ್ರೆ ೧.೫೦ ಲಕ್ಷ ರೂಪಾಯಿಗೆ ರೈತರು ಮಾರಾಟ ಮಾಡುತ್ತಾರೆ. ಆದರೆ ಈ ಹೋರಿ ಬರೋಬ್ಬರಿ ರೂ.೫.೧೦ ಲಕ್ಷ ರೂಪಾಯಿಗೆ ಮಾರಾಟವಾಗಿದ್ದು ಅಚ್ಚರಿ ಮೂಡಿಸಿದೆ.
ಈ ಹೋರಿ ಖಿಲಾರಿ ತಳಿಯ ಜವಾರಿ ಹೋರಿ. ತಾಲೂಕಿನ ಚೊಂಡಿ ಗ್ರಾಮದ ರೈತ ಶಿವಪ್ಪ ಕುಂಟೋಜಿ ಅವರಿಗೆ ಸೇರಿದ್ದ ಈ ಹೋರಿಗೆ ಈಪಾಟಿ ಬೆಲೆ ಬಂದಿದ್ದು ಶಿವಪ್ಪ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿವಪ್ಪನ ಮೂಲ ಕಸುಬು ವ್ಯವಸಾಯ. ಮೊದಲಿನಿಂದಲೂ ಚಿಕ್ಕ ಚಿಕ್ಕ ವಿವಿಧ ತಳಿಯ ಹೋರಿ ಮರಿಗಳನ್ನು ತಂದು ಅವುಗಳನ್ನು ಕಟ್ಟುಮಸ್ತಾಗಿ ಬೆಳೆಸಿ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಅದರಂತೆ ಈ ಹೋರಿಯನ್ನು ೩ವರ್ಷದ ಹಿಂದೆ ೩ವರ್ಷವಿದ್ದಾಗ ಮಹಾರಾಷ್ಟ್ರದಲ್ಲಿ ತರಲಾಗಿತ್ತು. ಸಧ್ಯ ಈಗ ಈ ಹೋರಿ ೬ ವರ್ಷದಾಗಿದ್ದು ಒಳ್ಳೆಯ ದುಡಿಮೆ ಮಾಡಿಕೊಟ್ಟಿದೆ.
ಸಧ್ಯ ಈ ಹೋರಿಯನ್ನು ಇಷ್ಟೊಂದು ಬೆಲೆ ಕೊಟ್ಟು ಕೊಂಡುಕೊಂಡೋರು ಮಹಾರಾಷ್ಟç ಮೂಲದ ರೈತರೊಬ್ಬರು. ಈ ಹೋರಿಯನ್ನು ಕ್ರೀಡೆಗಳಿಗೆ ಬಳಸಬಹುದು ಎಂಬ ಮಾತುಗಳು ಕೇಳಿಬಂದಿದ್ದು ಹೋರಿ ಖರೀಸಿದವನ ಅದೃಷ್ಟ ಕುಲಾಯಿಸಿತು ಎಂಬ ಮಾತುಗಳು ಕೇಳಿಬಂದಿವೆ.
ಬಹಳ ವರ್ಷಗಳಿಂದ ನಾನು ವಿವಿಧ ಜವಾರಿ ಹೋರಿಗಳನ್ನು ಮಾರಾಟ ಮಾಡಿದ್ದೇನೆ. ಅಬ್ಬಬ್ಬಾ ಅಂದರೆ ೨ ಲಕ್ಷಕ್ಕೆ ಮಾರಾಟವಾಗಿದೆ. ಆದರೆ ಈ ಹೋರಿ ಇಷ್ಟೊಂದು ಲಾಭ ತಂದುಕೊಡುತ್ತೆ ಅಂದು ಕೊಂಡಿರಲಿಲ್ಲ. ಈ ವ್ಯಾಪಾರ ಇನ್ನಷ್ಟು ಪ್ರೋತ್ಸಾಹಿಸಿದೆ.
- ಶ್ರೀಶೈಲ ಕುಂಟೋಜಿ. ಹೋರಿಯ ಮೊದಲ ಮಾಲೀಕ