ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚನೆ
ವಿಜಯಪುರ: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲ ೯ ಸಕ್ಕರೆ ಕಾರ್ಖಾನೆಗಳು ನವೆಂಬರ್ ೧ರಿಂದಲೇ ಕಬ್ಬು ನುರಿಸುವ ಕಾರ್ಯ ಆರಂಭಿಸಿ ಕಬ್ಬು ನುರಿಸಿದ ೧೪ ದಿನಗಳಲ್ಲಿ ನಿಗದಿಪಡಿಸಿದ ಎಫ್.ಆರ್.ಪಿ. ದರದಂತೆ ಕಬ್ಬಿನ ಬಿಲ್ ಪಾವತಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.
ಪ್ರಸಕ್ತ ೨೦೨೩-೨೪ ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ, ವ್ಯವಸ್ಥಾಪಕರು, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಸರ್ಕಾರವು ನವೆಂಬರ್ ೧ರಿಂದ ನ.೧೫ರೊಳಗೆ ಏಕಕಾಲದಲ್ಲಿ ಪ್ರಾರಂಭಿಸುವಂತೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಕಾರ್ಖಾನೆಗಳು ಪ್ರಸಕ್ತ ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು. ರೈತರಿಗೆ ಕಬ್ಬಿನ ಬಿಲ್ ಪಾವತಿಗೆ ವಿಳಂಬ ಮಾಡದೇ ಎಫ್.ಆರ್.ಪಿ. ದರದಂತೆ ನಿಗದಿತ ಅವದಿಯಲ್ಲಿಯೇ ಬಿಲ್ ಪಾವತಿಸುವಂತೆ ಅವರು ಸೂಚನೆ ನೀಡಿದರು.
ರೈತರಿಗೆ ಪಾವತಿಸಲಾಗುವ ಎಫ್.ಆರ್.ಪಿ. ದರ ಹಾಗೂ ಕಬ್ಬು ಕಟಾವು ಮತ್ತು ಸರಕು ಸಾಗಾಣಿಕಾ ಮೊತ್ತದ ಕುರಿತು ಮಾಹಿತಿ ಒದಗಿಸಬೇಕು. ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಎಲ್ಲ ಕಾರ್ಖಾನೆಗಳು ಪಾಲಿಸಬೇಕು ಎಂದು ಸೂಚಿಸಿದರು.
ಕಬ್ಬು ಕಟಾವು ಮಾಡಲು ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಆಗಮಿಸುವ ಕಾರ್ಮಿಕರು ತಮ್ಮ ಜೊತೆಯಲ್ಲಿ ತಮ್ಮ ಮಕ್ಕಳನ್ನು ಕಬ್ಬು ಕಟಾವುಗೆ ಬರುವುದರಿಂದ ಬಾಲ ಕಾರ್ಮಿಕರನ್ನು ತೆಗೆದುಕೊಳ್ಳಬಾರದೆಂದು ಸಂಬಂಧಿಸಿದವರಿಗೆ ಕಾರ್ಖಾನೆಯವರು ಸೂಚನೆ ನೀಡಬೇಕು. ಬಾಲಕಾರ್ಮಿಕರ ಪರಿಶೀಲನೆಗೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದು, ಉಪವಿಭಾಗಾಧಿಕಾರಿಗಳು ಕಟಾವು ಮಾಡುವ ಪ್ರದೇಶಗಳಿಗೆ ಅನಿರಿಕ್ಷೀತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಒಂದು ವೇಳೆ ಬಾಲ ಕಾರ್ಮಿಕ ಪ್ರಕರಣ ಕಂಡು ಬಂದರೆ ಕಾನೂನಿನ್ವಯ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಆಸ್ಪದ ನೀಡಬಾರದು. ಕಬ್ಬು ಕಟಾವಿಗೆ ಬಂದ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಬಿಡುವಂತೆ ಕಾರ್ಮಿಕರಿಗೆ ತಿಳುವಳಿಕೆ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಬಸಣೆಪ್ಪ ಕಲಶೆಟ್ಟಿ, ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ,ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಆಹಾರ ಇಲಾಖೆಯ ಅಮರೇಶ ತಾಂಡೂರ ಹಾಗೂ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

