ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಸ್ತುತ ಇಂದಿನ ದಿನಗಳಲ್ಲಿ ಮಕ್ಕಳಿಗೆ ಆತ್ಮರಕ್ಷಣೆಯ ಅವಶಕ್ಯತೆಯಿದೆ. ಜೀವನ ಸಂಕೀರ್ಣಮಯವಾಗುತ್ತಿದ್ದು, ಅನೇಕ ಸಂದರ್ಭಗಳಲ್ಲಿ ಮಕ್ಕಳ ಮೇಲೆ ಹಲ್ಲೆ, ದೌರ್ಜನ್ಯ ಮತ್ತು ಮಾನಸಿಕ ಮತ್ತು ದೈಹಿಕ ಹಿಂಸೆಯಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಆದ್ದರಿಂದ ಮಕ್ಕಳಲ್ಲಿ ಆತ್ಮಸ್ಥೈರ್ಯ, ಆತ್ಮರಕ್ಷಣೆ ಮತ್ತು ಮಾನಸಿಕ ಆತ್ಮಬಲವನ್ನು ಹೆಚ್ಚಿಸುವದರೊಂದಿಗೆ ಸಾಮಾಜಿಕವಾಗಿ ಜಾಗರೂಕರನ್ನಾಗಿ ಮಾಡಲು ಕರಾಟೆ ತರಬೇತಿ ಅತಿ ಅವಶ್ಯಕವಾಗಿದೆ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಎನ್.ಜಿ,ಓ ಕಾಲನಿಯ ಜೈ ಶ್ರೀ ಆಂಜನೇಯ ದೇವಸ್ಥಾನದ ೬ ನೇಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಮಕ್ಕಳಿಗಾಗಿ ಕರಾಟೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಶಾಲೆ, ಪಾಠ-ಪ್ರವಚನ, ಹೋಮ್ ವರ್ಕ, ಟ್ಯೂಷನ್ ಹೀಗೆ ಶಿಕ್ಷಣ ಕೇವಲ ಜ್ಞಾನಾರ್ಜನೆಗಾಗಿ ಎನ್ನುವಂತಾಗಿದೆ. ಮಕ್ಕಳು ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಾಗ ಮಾತ್ರ ಸರ್ವಾಂಗೀಣ ಪ್ರಗತಿ ಹೊಂದುವರು. ಆದ್ದರಿಂದ ತರಬೇತಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಗತ್ಯವಾಗಿದೆ. ಇದು ಕೇವಲ ಹೋರಾಟದ ಕಲೆ ಅಲ್ಲ. ಬದಲಾಗಿ ಜೀವನದಲ್ಲಿ ಶಿಸ್ತು ಮತ್ತು ನಮ್ರತೆಯನ್ನು ಕಲಿಸುತ್ತದೆ. ಸಂಭಾವ್ಯ ಅಪಾಯಗಳನ್ನು ಗುರುತಿಸಲು ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಕಲಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಮೀತಿ ಅಧ್ಯಕ್ಷ ಸಂತೋಷ ಪಾಟೀಲ, ನಿರ್ದೇಶಕರಾದ ಎಸ್.ಬಿ. ಬಿರಾದಾರ, ಎಸ್.ಜಿ.ನಿಂಗನಗೌಡ್ರ, ಬಿ.ಎನ್.ಕುಟನೂರ, ಬಾಬು ಕೋಲಕಾರ, ಬಲವಂತ ಬಳೂಲಗಿಡದ, ಲಕ್ಷ್ಮಣ ಶಿಂಧೆ, ಶ್ರೀರಾಮ ದೇಶಪಾಂಡೆ, ಆರ್,ಎಸ್,ಕುಮಟಗಿ ಇನ್ನಿತರರು ಉಪಸ್ಥಿತರಿದ್ದರು.
ಈ ಕರಾಟೆ ತರಬೇತಿ ಶಿಬಿರದಲ್ಲಿ ಎನ್.ಜಿ.ಓ, ಎಲೆಗಂಟ್ಸಾ ಮಧುವನ, ವಿಜಯಾ ಕಾಲನಿ, ಅಭಿಷೇಕ, ಸೇನಾ ನಗರ ಪ್ರತೀಕ್ಷಾ ನಗರ ಸೇರಿದಂತೆ ಸುತ್ತಮುತ್ತಲಿನ ನವರಸಪುರದ ವಿವಿಧ ಬಡಾವಣೆಯ ೫೦ ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

