ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಓಡಾಡುವ ಎಲ್ಲ ಅಟೋ ಚಾಲಕರು ಅಟೋ ಲೈಸನ್ಸ್, ಚಾಲಕರ ಲೈಸನ್ಸ್, ವಿಮೆ ಹೊಂದುವ ಮೂಲಕ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ರಸ್ತೆ ಸುರಕ್ಷತಾ ನಿಯಮಗಳು ನಿಮಗಾಗಿಯೇ ಇವೆ.ಅವುಗಳನ್ನು ಪಾಲಿಸದರೇ ನಿಮಗೆ ಯಾವುದೇ ರೀತಿಯ ತೊಂದರೆಯಾಗುವದಿಲ್ಲ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಪೊಲೀಸ್ ಇಲಾಖೆಯು ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಸಪ್ತಾಹ-2026 ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ರಸ್ತೆಯಲ್ಲಿ ಅಡ್ಡಾತಿಡ್ಡಿಯಾಗಿ ತಮ್ಮ ಅಟೋಗಳನ್ನು ನಿಲ್ಲಿಸುವಂತಾಗಬಾರದು. ನಿಗದಿ ಸ್ಥಳದಲ್ಲಿ ತಮ್ಮ ಅಟೋಗಳನ್ನು ನಿಲ್ಲಿಸಬೇಕು. ಅಪ್ರಾಪ್ತ ವಯಸ್ಕರಿಗೆ ಯಾವುದೇ ಕಾರಣಕ್ಕೂ ಮ್ಮ ಅಟೋಗಳನ್ನು ಕೊಡಬಾರದು. ಒಂದು ವೇಳೆ ಇಂತಹವರು ಚಾಲನೆ ಮಾಡುವದು ಕಂಡುಬಂದರೆ ನಾವು ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ತಮ್ಮ ಅಟೋಗಳಲ್ಲಿ ಯಾವುದೇ ಕಾರಣಕ್ಕೂ ಅಶ್ಲೀಲವಾದ ಹಾಡುಗಳನ್ನು ಹಚ್ಚಬಾರದು. ಇದು ಬಸವನಾಡು ಇರುವದರಿಂದ ತಮ್ಮ ಅಟೋಗಳಲ್ಲಿ ವಚನಗಳನ್ನು ಹಾಕುವ ಮೂಲಕ ಇತರರಿಗೆ ಮಾದರಿಯಾಗಬೇಕಿದೆ. ತಾವು ವಿಶ್ರಾಂತಿ ಸಮಯದಲ್ಲಿ ಇಯರ್ ಪೋನ್ ಹಾಕಿಕೊಂಡು ಬೇಕಾದರೆ ಹಾಡುಗಳನ್ನು ಕೇಳಬಹುದು. ಎಲ್ಲೆಂದರಲ್ಲಿ ತಮ್ಮ ಅಟೋಗಳನ್ನು ನಿಲ್ಲಿಸಿದರೆ ಆಗ ಉಳಿದ ವಾಹನ ಸವಾರರು ತಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸುವದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಪಟ್ಟಣದ ಬಸವೇಶ್ವರ ವೃತ್ತದಿಂದ ನಂದಿ ತರಕಾರಿ ಮಾರುಕಟ್ಟೆಯವರೆಗೆ, ವಿಜಯಪುರ ರಸ್ತೆಯಲ್ಲಿರುವ ಬಸವ ಭವನದವರೆಗೂ ಇರುವ ಎರಡು ರಸ್ತೆಗಳು ಕಿರಿದಾಗಿರುವದರಿಂದಾಗಿ ಈ ರಸ್ತೆಯಲ್ಲಿ ಎಲ್ಲಿಯೂ ತಮ್ಮ ಅಟೋಗಳನ್ನು ನಿಲ್ಲಿಸಬಾರದು. ಸಮಾಜದಲ್ಲಿ ಎಲ್ಲರೂ ಚೆನ್ನಾಗಿದ್ದರೆ ಸಮಾಜವು ಚೆನ್ನಾಗಿ ಇರಲು ಸಾಧ್ಯ. ಸಮಾಜಕ್ಕೆ ಒಳ್ಳೆಯ ಕೊಡುಗೆ ಕೊಡುವಂತಾಗಬೇಕಿದೆ. ಸ್ವಲ್ಪ ದಿನದಲ್ಲಿ ಪಟ್ಟಣದಲ್ಲಿ ಆರ್.ಟಿ.ಎಂ.ಎಸ್ ಬರುವ ಸಾಧ್ಯತೆಯಿದೆ. ಇದಕ್ಕೆ ಸಚಿವ ಶಿವಾನಂದ ಪಾಟೀಲರು ಅನುದಾನ ನೀಡಲಿದ್ದಾರೆ. ಇದು ಜಾರಿಗೆ ಬಂದರೆ ಯಾರೂ ರಸ್ತೆ ಕಾನೂನು ಉಲ್ಲಂಘನೆ ಮಾಡುತ್ತಾರೋ ಅವರಿಗೆ ನೇರವಾಗಿ ದಂಡದ ನೋಟೀಸ್ ಹೋಗುತ್ತದೆ ಎಂದರು.
ಪಿಐ ಗುರುಶಾಂತ ದಾಶ್ಯಾಳ ಮಾತನಾಡಿ, ಅಟೋ ಚಾಲಕರು ನಿಗದಿತ ಸೀಟುಗಳನ್ನು ಮಾತ್ರ ಹಾಕಬೇಕು. ಎಲ್ಲರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ಕೆಲವರಿಗೆ ಈಚೆಗೆ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲಾಗಿದೆ. ರಸ್ತೆ ನಿಯಮಗಳನ್ನು ಪಾಲಿಸಿದವರಿಗೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುವುದಿಲ್ಲ. ಪಟ್ಟಣದಲ್ಲಿರುವ ಅಟೋದವರು ಚೆನ್ನಾಗಿ ಇಲ್ಲ ಎಂಬ ಮಾತು ಬಾರದಂತೆ ತಾವು ತಮ್ಮ ಕೆಲಸ ಮಾಡಬೇಕು. ಕೆಲವರು ಬಸ್ ನಿಲ್ದಾಣ, ಬಸವ ಭವನದ ಮುಂಭಾಗ ಕೆಲವರು ಅಟೋದಲ್ಲಿ ಕುಳಿತುಕೊಂಡು ಮಧ್ಯ ಸೇವನೆ ಮಾಡುವ ಸಂದರ್ಭದಲ್ಲಿ ಅವರ ಮೇಲೆ ಡಿಡಿ ಕೇಸ್ ಹಾಕಿ ಕ್ರಮ ತೆಗೆದುಕೊಂಡಿದ್ದೇನೆ. ಇಂತಹ ಘಟನೆಗಳನ್ನು ಆಗದಂತೆ ಅಟೋ ಚಾಲಕರು ಗಮನ ಹರಿಸಬೇಕು. ಸರದಿಯಲ್ಲಿ ಅಟೋಗಳನ್ನು ನಿಲ್ಲಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸಂದೇಹಸ್ಪದ ವ್ಯಕ್ತಿಗಳು ಕಂಡುಬಂದರೆ 112 ಗೆ, ಆಕಸ್ಮಿಕವಾಗಿ ಅಪಘಾತಗಳು ಸಂಭವಿಸಿದರೆ ಮಾನವೀಯ ದೃಷ್ಟಿಯಿಂದ ಆಸ್ಪತೆಗೆ ಸಾಗಿಸಿ ಇಲ್ಲವೇ 108 ಗೆ ಕಾಲ್ ಮಾಡಬೇಕು. ತಮ್ಮ ಅಟೋಗಳಲ್ಲಿ ಅಪರಿಚಿತರು ಲಗೇಜ್, ಇತರೇ ಆಭರಣಗಳನ್ನು ಬಿಟ್ಟುಹೋದಿದ್ದರೆ ಅವುಗಳನ್ನು ಠಾಣೆಗೆ ತಂದುಕೊಡಬೇಕೆಂದರು.
ಸಭೆಯಲ್ಲಿ ಅಟೋ ಚಾಲಕರಾದ ಸಿದ್ದು ವಂದಾಲ, ಶ್ರೀಶೈಲ ಕರವೀರಮಠ, ರವಿ ಕೊಕಟನೂರ, ಅಬುಬಕರ ಬಾಗವಾನ, ಕೆಂಚಪ್ಪ ಬೆನ್ನೂರ, ಬಸವರಾಜ ಮಡಿಕೇಶ್ವರ, ಹಣಮಂತ ತಳೇವಾಡ, ಸಂದೀಪ ಮಡಿಕೇಶ್ವರ, ಮಾಂತು ಬಸರಕೋಡ,ಬಾಬು ಚವ್ಹಾಣ ಇತರರು ಇದ್ದರು.

