ಕಲಕೇರಿ: ಪ್ರವಾದಿ ಮಹ್ಮದರ ವಾಣಿಯಂತೆ ಮನುಷ್ಯನ ಶ್ರೇಷ್ಟತೆ ಅವನ ನಡತೆಯಲ್ಲಿ ಅಡಗಿದ್ದು, ನನ್ನ ಕೈಯಿಂದ ಮತ್ತು ನಾಲಿಗೆಯಿಂದ ಇನ್ನೊಬ್ಬರಿಗೆ ನೋವುಂಟಾಗಬಾರದು ಈ ನಿಟ್ಟಿನಲ್ಲಿ ಪ್ರವಾದಿ ಮಹ್ಮದರ ಜನ್ಮದಿನದ ಅದ್ದೂರಿ ಆಚರಣೆಗಿಂತ ಅವರ ಅನುಸರಣೆ ಬಹಳ ಮುಖ್ಯ ಎಂಬುದನ್ನು ನಾವು ಅರಿಯಬೇಕು ಹಾಗೂ ತಾಯಿಯ ಸೇವೆ ಮಾಡಿದಾಗ ಮಾತ್ರ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪ್ರವಚನಕಾರ ಜನಾಬ ಲಾಲಹುಸೇನಸಾಹೇಬ ಕಂದಗಲ್ ಇಲಕಲ್ ಹೇಳಿದರು.
ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರರ ದೇವಸ್ಥಾನದ ಮುಂಭಾಗ ಆಯೋಜಿಸಲಾದ ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯ ಸೀರತ ಪ್ರವಚನ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ತಾರತಮ್ಯ ಭಾವನೆ ತೊರೆದು ನಯವಿನಯದಿಂದ ವರ್ತಿಸಬೇಕು. ಮನುಷ್ಯ ಎಂಬ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವಂತ ಔದಾರ್ಯತೆ ನಮ್ಮಲ್ಲಿ ಬರಬೇಕು, ಹೃದಯವಿದ್ದರೆ ಸಾಲದು, ಪ್ರತಿಯೊಬ್ಬರಲ್ಲಿಯೂ ಹೃದಯವಂತಿಕೆ ಇರಬೇಕು ಎಂದು ಹೇಳಿದರು.
ಇಂದು ನಾವೆಲ್ಲ ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ಮಹಾತ್ಮರನ್ನು ಮತ್ತು ಅವರ ಸಂದೇಶಗಳನ್ನು ಸಂಕುಚಿತಗೊಳಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದು, ದೇವರಿದ್ದಾನೆ ಎಂಬ ವಿಶ್ವಾಸ ಮತ್ತು ದೇವರ ಬಗ್ಗೆ ಭಯ ಭಕ್ತಿಯಿಂದ ಬದುಕಿದಾಗ ಮಾತ್ರ ನಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಶ್ರೀಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಶ್ರೀಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಜಗತ್ತಿನಲ್ಲಿರುವ ಸರ್ವಧರ್ಮಗಳ, ಸರ್ವಧರ್ಮ ಗ್ರಂಥಗಳ ಸಾರ ಮತ್ತು ಸಂತ, ಶರಣರು, ಮಹಾತ್ಮರು, ಸೂಫಿಗಳು ಸಾರಿದ ತತ್ವ ಸಿದ್ಧಾಂತಗಳ ಸಾರ ಒಂದೇಯಾಗಿದ್ದು, ಎಲ್ಲ ವಿಚಾರಗಳು ಮಾನವ ಕಲ್ಯಾಣದ ದಾರಿ ದೀಪಗಳಾಗಿದ್ದು, ಪ್ರತಿಯೊಬ್ಬರು ಇದನ್ನು ಅರಿತು ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಲಾನಾ ನಾಸಿರಹ್ಮದ ಉಮ್ರಿ ಇನಾಮದಾರ ವಹಿಸಿದ್ದರು.
ದೊಡ್ಡ ಶರಬಯ್ಯ ಗದ್ದಗಿಮಠ, ಎ.ಎಸ್.ಐ ಎಸ್ ಡಿ ಭಾವಿಕಟ್ಟಿ, ಡಾ.ವ್ಹಿ ಕೆ ಜಾಲಹಳ್ಳಿಮಠ ಸೇರಿದಂತೆ ಇತರರು ಇದ್ದರು.
ತಾಯಿ ಸೇವೆ ಮಾಡಿ ಸ್ವರ್ಗ ಪ್ರ‍್ರಾಪ್ತಿ ಮಾಡಿಕೊಳ್ಳಿ :ಲಾಲಹುಸೇನ
Related Posts
Add A Comment