ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ಮುಳಸಾವಳಗಿ ಗ್ರಾಮದ ರಾಜಶೇಖರ ಬಿರಾದಾರ ಕುಟುಂಬಕ್ಕೆ ಸೇರಿದ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದು ಸುಮಾರು ೯ ಎಕರೆ ಬೆಳೆ ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ಜರುಗಿದೆ.
ಗ್ರಾಮದ ಸರ್ವೇ ನಂ.೩೨೨/೨ ಹಾಗೂ ೩೨೩ರಲ್ಲಿ ಬೆಳೆಯಲಾಗಿದ್ದ ಕಬ್ಬು ಬೆಳೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಹಾನಿಗೀಡಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು ಗಂಟೆಗಳ ಕಾಲ ಹರಸಾಹಸ ಪಟ್ಟರು, ಪ್ರಯತ್ನ ಫಲಿಸಲಿಲ್ಲ. ಬೆಂಕಿ ನಂದಿಸುವುದರಲ್ಲಿ ಬಹುತೇಕ ಸುಟ್ಟು ಕರಕಲಾಗಿತ್ತು. ಕಬ್ಬು ಕಟಾವಿಗೆ ಬಂದು ಕಾರ್ಖಾನೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ೮೦ ಸ್ಪಿಂಕರ್ ಪೈಪ್‌ಗಳು, ೪೦ ಪಿವಿಸಿ ಪೈಪ್‌ಗಳು, ೪೦೦ ಅಡಿ ಕೇಬಲ್ ವೈರ್ ಸೇರಿದಂತೆ ಒಟ್ಟು ೧೫.೯೫ ಲಕ್ಷ ರೂ.ಗಳ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕಂದಾಯ, ಕೃಷಿ, ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದು, ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಲವಾರು ತಿಂಗಳಿನಿಂದ ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ಸುಟ್ಟು ಹೋಗುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಅದಕ್ಕಾಗಿ ತಕ್ಷಣವೇ ಹೆಸ್ಕಾಂ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿಕೊಡಬೇಕೆಂದು ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಬಸವರಾಜ ಕಲ್ಲೂರ, ಸಾಹೇಬಗೌಡರೆಡ್ಡಿ, ಸಾಹೇಬಗೌಡ ನಾಗರಳ್ಳಿ ಆಗ್ರಹಿಸಿದ್ದಾರೆ.

