ದೇವರಹಿಪ್ಪರಗಿಯಲ್ಲಿ ಉತ್ತಮ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ವಿತರಣೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಾಲೆ ಮತ್ತು ಅಂಗನವಾಡಿಗಳು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣದ ಮೂಲಕೇಂದ್ರಗಳಾಗಿವೆ. ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ನೇಹಸಂಸ್ಥೆ, ಐಎಲ್‌ಪಿ-ಕಲಿಕಾ ಚೇತನ ಯೋಜನೆಯಡಿ ಜರುಗಿದ ಉತ್ತಮ ಶಿಕ್ಷಕ ಮತ್ತು ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಸ್ಥಳೀಯ ಮಟ್ಟದಲ್ಲಿ ಇಂತವರನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ತುಂಬಾ ಒಳ್ಳೆಯ ಕಾರ್ಯ. ನಾವು ಪಡೆದುಕೊಂಡ ಪ್ರಶಸ್ತಿಗಳು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತವೆ ಎಂದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿ, ಸದೃಢ ಮತ್ತು ಸಮರ್ಥ ಸಮಾಜದ ನಿರ್ಮಾಣಕ್ಕೆ ಶಿಕ್ಷಣವೇ ಭದ್ರಬುನಾದಿ. ಶಿಕ್ಷಣ ಗುಣಮಟ್ಟದಿಂದ ಕೂಡಿರಬೇಕೆಂದರೆ ಶಿಕ್ಷಕ,ಪಾಲಕ, ಬಾಲಕ ಈ ಮೂವರು ಕೊಂಡಿಯಾಗಿ ಇರಬೇಕು ಎಂದು ಹೇಳುತ್ತಾ, ಶಿಕ್ಷಕರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್ ವಾಲೀಕಾರ ಮಾತನಾಡಿ, ದೇಶದ ಭವಿಷ್ಯ ಅಡಗಿರುವುದು ವರ್ಗದ ಕೋಣೆಯಲ್ಲಿ. ನಾವು ಮಾಡುವ ಕೆಲಸ ನಮಗೆ ತೃಪ್ತಿ ನೀಡಬೇಕು ಎಂದರು.
ಸಿಆರ್‌ಪಿ ವಿಜಯಲಕ್ಷ್ಮೀ ನವಲಿ, ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಎಸ್.ಎಸ್.ಸಾತಿಹಾಳ ಹಾಗೂ ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮೀ ಹಿಪ್ಪರಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಎಸ್.ಎಸ್.ಸಾತಿಹಾಳ(ಮುಖ್ಯಶಿಕ್ಷಕ ಕೆರೂಟಗಿ), ಬಸಲಿಂಗಮ್ಮ ಅಗ್ನಿ(ಕೊಂಡಗೂಳಿ), ಅಂಗನವಾಡಿ ಕಾರ್ಯಕರ್ತೆಯರಾದ ಹೊನ್ನಮ್ಮ ಚವ್ಹಾಣ(ಕೊರವಾರ ಎಲ್.ಟಿ ೨), ಲಕ್ಷ್ಮೀ ಹರಿಜನ(ವರ್ಕಾನಳ್ಳಿ), ಕಲಾವತಿ ವಾಲೀಕಾರ (ಗಬಸಾವಳಗಿ), ಕಸ್ತೂರಿ ಹಿಪ್ಪರಗಿ(ಮಾರ್ಕಬ್ಬಿನಹಳ್ಳಿ), ವಿಜಯಲಕ್ಷ್ಮೀ ಹಿಪ್ಪರಗಿ (ಯಾಳವಾರ), ಸುರೇಖಾ ಹಿರೇಮಠ(ಮಾರ್ಕಬ್ಬಿನಹಳ್ಳಿ),ಅಕ್ಕಮ್ಮ ಬಿರಾದಾರ(ಭೈರವಾಡಗಿ) ಇವರನ್ನು ಸನ್ಮಾನಿಸಲಾಯಿತು.
ಐಎಲ್‌ಪಿ ರಾಷ್ಟ್ರೀಯ ಸಮನ್ವಯಾಧಿಕಾರಿ ವಿಕ್ಟರ ಟಾರೋ, ಸ್ನೇಹಸಂಸ್ಥೆ ನಿರ್ದೇಶಕ ಟಿ. ರಾಮಾಂಜನೇಯ, ಪಟ್ಟಣ ಪಂಚಾಯಿತ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಆರೋಗ್ಯ ಇಲಾಖೆಯ ಸುಕನ್ಯಾ ಚಳಗೇರಿ, ಸೋಮಶೇಖರ ಭೋವಿ, ಮುಖ್ಯಶಿಕ್ಷಕ ಪಿ.ಸಿ.ತಳಕೇರಿ, ಸಂಪನ್ಮೂಲ ವ್ಯಕ್ತಿ ರಾವುತ ಮರಬಿ, ಸಂಯೋಜಕ ಸಾಗರ ಘಾಟಗೆ, ಬಸವರಾಜ ದೇವಣಗಾಂವ, ಭಾಗಣ್ಣ ಹಾಳಕಿ, ಮಲ್ಲಮ್ಮ ಹೊನ್ನಳ್ಳಿ, ಭೀಮಾಬಾಯಿ ಹೇರೂರ, ಶ್ರೀಶೈಲ ಜೋಗರ, ಗೌಡಪ್ಪ ಬಿರಾದಾರ ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಮಕ್ಕಳು ಇದ್ದರು.

