ವಿಜಯಪುರದಲ್ಲಿ ಜ.೧೧ರಿಂದ ಮೈಸೂರು ಸ್ಯಾಂಡಲ್ ಸೋಪ್ ಮತ್ತು ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ | ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಗಂಗಪ್ಪ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ಇದೇ ದಿನಾಂಕ ೧೧ ರಿಂದ ೧೦ ದಿನಗಳ ಕಾಲ ಮೈಸೂರು ಸ್ಯಾಂಡಲ್ ಸೋಪು ಹಾಗೂ ವಿವಿಧ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ `ಸೋಪ್ ಮೇಳ’ ಶೀರ್ಷಿಕೆಯಡಿಯಲ್ಲಿ ನಡೆಯಲಿದ್ದು, ಈ ಮೇಳಕ್ಕೆ ಪೂರಕ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೈಸೂರ ಸ್ಯಾಂಡಲ್ ಸೋಪು ಉತ್ಪಾದನಾ ಘಟಕದ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಗಂಗಪ್ಪ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಮೈಸೂರು ಸ್ಯಾಂಡಲ್ ಸೋಪು ಹಾಗೂ ಉತ್ಪನ್ನಗಳು ಗ್ರಾಹಕರ ಜನಪ್ರಿಯತೆ ಪಡೆದುಕೊಂಡ ಬ್ರ್ಯಾಂಡ್ ಆಗಿದ್ದು, ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಮೈಸೂರು ಸ್ಯಾಂಡಲ್ ಮೊದಲಾದ ಉತ್ಪನ್ನ ಉತ್ಪಾದಿಸುವ ಘಟಕ ೨೦೧೦, ೨೦೧೭ ನೇ ವರ್ಷ ಮತ್ತು ೨೦೧೯ ನೇ ಸಾಲಿಗೆ ಸಾರ್ವಜನಿಕ ಶ್ರೇಷ್ಠತೆಗಾಗಿ ಮುಖ್ಯಮಂತ್ರಿ ರತ್ನ ಪ್ರಶಸ್ತಿಯೂ ಸೇರಿದಂತೆ ರಫ್ತು, ಹಾಗೂ ಕಾಸ್ಟ್ ಆಕೌಂಟಿಂಗ್ ನಿರ್ವಹಣೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ. ಸಂಸ್ಥೆಯ ಶ್ರೀಗಂಧದೆಣ್ಣೆ ಸೇರಿದಂತೆ ಸಾಬೂನು, ಮಾರ್ಜಕ, ಸೌಂದರ್ಯವರ್ಧಕ, ಆಗರಬತ್ತಿ ಸೇರಿದಂತೆ ಸುಮಾರು ೫೦ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದರು.
ಮೇಳವು ಪ್ರತಿ ದಿನ ಬೆಳಿಗ್ಗೆ ೯.೩೦ ಗಂಟೆಯಿಂದ ರಾತ್ರಿ ೯.೦೦ ಗಂಟೆಯವರೆಗೆ ನಡೆಯಲಿದೆ, ಮೈಸೂರು ಅರಮನೆಯ ದರ್ಬಾರ್ ಹಾಲ್‌ನ ವೈಭವವನ್ನು ಸೃಜಿಸಲಾಗಿದೆ, ಗ್ರಾಹಕರು ವಿಶೇಷ ರಿಯಾಯಿತಿ ದರದಲ್ಲಿ ತಮಗೆ ಬೇಕಾದ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ ಎಂದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು ಸಂಪೂರ್ಣ ಸರ್ಕಾರಿ ಸ್ವಾಮ್ಯದ ಒಡೆತನದಲ್ಲಿದ್ದು, ನೈಸರ್ಗಿಕ ಶ್ರೀಗಂಧದೆಣ್ಣೆಯಿಂದ ತಯಾರಿಸಿರುವ ಮೈಸೂರು ಸ್ಯಾಂಡಲ್ ಸಾಬೂನಿನಿಂದ ವಿಶ್ವವಿಖ್ಯಾತಿ ಪಡೆದಿದೆ ಹಾಗೂ ಭೌಗೋಳಿಕ ಸ್ವಾಮ್ಯ ಪ್ರಮಾಣ ಪತ್ರವನ್ನು ಕೇಂದ್ರ ಸರ್ಕಾರದಿಂದ ಪಡೆದಿದ್ದು, ಭಾರತದ ಬೌದ್ಧಿಕ ಆಸ್ತಿಯಾಗಿದೆ ಎಂದರು.
ಸಂಸ್ಥೆಯು ಗ್ರಾಹಕರಿಗೆ ಅಂತರಾಷ್ಟ್ರೀಯ ಗುಣ ಮಟ್ಟದ ವಿಶಿಷ್ಟ ರೀತಿಯಿಂದ ಕೂಡಿದ ಉತ್ಪನ್ನವಾದ ‘ಮೈಸೂರು ಸ್ಯಾಂಡಲ್ ಮಿಲೇನಿಯಂ’ ಸೂಪರ್ ಪ್ರೀಮಿಯಂ ಸಾಬೂನನ್ನು ೨೦೧೨ ಮತ್ತು ೨೦೨೪ ರಲ್ಲಿ ಹ್ಯಾಡ್ ವಾಶ್ ಮತ್ತು ವೆವ್ ಸೋಪಿನ ವಿಭಿನ್ನ ಸುವಾಸನೆಯುಳ್ಳ ಸಾಬೂನುಗಳನ್ನು ಬಿಡುಗಡೆಗೊಳಿಸಿದ್ದು ಈ ಸಾಬೂನಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ ಎಂದು ವಿವರಿಸಿದರು.
ಅಧಿಕಾರಿಗಳಾದ ಆರ್. ಸುಷ್ಮಾ, ವಿಜಯಮಹಾಂತೇಶ ಕಾಮತ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಲಾಭದಲ್ಲಿ ಸಂಸ್ಥೆ ಮುನ್ನಡೆ
ಬಹುರಾಷ್ಟ್ರೀಯ ಸಂಸ್ಥೆಗಳ ತೀವ್ರ ಪೈಪೋಟಿಯ ನಡುವೆಯೂ ಸಂಸ್ಥೆಯು ಹೆಚ್ಚಿನ ವಹಿವಾಟನ್ನು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದ್ದು ೨೦೨೩-೨೪ ನೇ ಸಾಲಿನಲ್ಲಿ ರೂ.೧೫೭೧.೦೦ ಕೋಟಿ ವಹಿವಾಟು ನಡೆಸಿ ಅಂದಾಜು ನಿವ್ವಳ ರೂ.೩೬೨.೦೦ ಕೋಟಿಗಳ ದಾಖಲೆ ಲಾಭ ಗಳಿಸಿದ್ದೂ ಹಾಗೂ ಆರ್ಥಿಕ ವರ್ಷ ೨೦೨೪-೨೫ರಲ್ಲಿ ಉತ್ಪನ್ನಗಳ ಮಾರಾಟದಲ್ಲಿ ಎಲ್ಲಾ ರಾಜ್ಯಗಳಲ್ಲಿ ಉತ್ತಮ ಪ್ರಗತಿ ತೋರುತ್ತಿದ್ದು ವಹಿವಾಟು ರೂ.೧೭೮೭.೨೫ ಕೋಟಿಗಳಾಗಿದ್ದು ಶೇ.೧೪ ರಷ್ಟು ಪ್ರಗತಿಯೊಂದಿಗೆ ನಿವ್ವಳ ಲಾಭ ರೂ.೪೫೧.೦೪ ಕೋಟಿ ಗಳಿಸಿರುತ್ತದೆ. ಪ್ರಸಕ್ತ ವರ್ಷ ೨೦೨೫-೨೬ ಕ್ಕೆ ಇದೇ ಪ್ರಗತಿ ಮುಂದುವರೆದಿದ್ದು ಸಂಸ್ಥೆಯು ಡಿಸೆಂಬರ್ ೨೦೨೫ ರವರೆಗೆ ರೂ.೧೪೮೪.೭೦ ಕೋಟಿ ವಹಿವಾಟನ್ನು ನಡೆಸಿರುತ್ತದೆ.

