ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಮಕ್ಕಳಲ್ಲಿ ಸಾಕ್ಷರತೆ ಅಡಿಪಾಯ, ಭಾವನಾತ್ಮಕ ಬೆಳವಣಿಗೆಗೆ ಪೂರಕವಾದ ಕಲೆ, ಸಂಗೀತ ಮತ್ತು ಆಟಗಳ ಮೂಲಕ ಮಕ್ಕಳು ಪರಸ್ಪರ ಕಲಿಕೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸುವುದು ಕಲಿಕಾ ಹಬ್ಬದ ಉದ್ದೇಶಗಳಾಗಿವೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ್ ನಾಯಕ ಹೇಳಿದರು.
ಪಟ್ಟಣದ ಕೆಜಿಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಬಸವನ ಬಾಗೇವಾಡಿ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಸಹಯೋಗದಲ್ಲಿ ಮಕ್ಕಳ ಕಲಿಕಾ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮುದಾಯದ ಭಾಗವಹಿಸುವಿಕೆ, ಪೋಷಕರು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರನ್ನು ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಿಕ್ಷಕ ಸಂಘದ ಜಿಲ್ಲಾ ಉಪಾಧ್ಯಕ್ಷ ಅಶೋಕ ಗಿಡ್ಡಪ್ಪಗೋಳ ಮಾತನಾಡಿ ಕಲಿಕಾ ಹಬ್ಬ ಇದರಿಂದ ಮಕ್ಕಳಿಗೆ ಆನಂದದಾಯಕ ಕಲಿಕೆಯ ಕೌಶಲ್ಯಗಳನ್ನು ನೀಡಿ, ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವ ಒಂದು ಶೈಕ್ಷಣಿಕ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎನ್. ತಡಲಗಿ ಮಾತನಾಡಿ ಇಂತಹ ಕಲಾಜಾತಾಗಳು, ಅಕ್ಷರ ಬಂಡಿಗಳು, ಮಕ್ಕಳ ನೃತ್ಯಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗುವ ಸಂದರ್ಭದಲ್ಲಿ ಸಚಿವ ಶಿವಾನಂದ ಎಸ್ ಪಾಟೀಲರು ಮಕ್ಕಳ ನೃತ್ಯ ಕಂಡು ಇಂತಹ ಮಕ್ಕಳು ನಮ್ಮ ಸರ್ಕಾರಿ ಶಾಲೆ ಮಕ್ಕಳು ಎಂದು ಅಭಿಮಾನ ವ್ಯಕ್ತಪಡಿಸಿದ್ದು ನೋಡಿದರೆ ತುಂಬಾ ಸಂತೋಷ ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಚನಮಲ್ಲಪ್ಪ ಗಿಡ್ಡಪ್ಪಗೋಳ ಕಲಿಕಾ ಹಬ್ಬದ ಜಾಥಾ ಎತ್ತಿನ ಬಂಡಿಗಳಿಗೆ ಚಾಲನೆ ನೀಡಿದರು.
ಕಲಿಕಾ ಹಬ್ಬದ ಕಾರ್ಯಕ್ರಮವನ್ನು ಎಸ್ಡಿಎಂಸಿ ಅಧ್ಯಕ್ಷೆ ರೂಪಾ ಗಿಡ್ಡಪ್ಪಗೋಳ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿಶೇಷತೆ: ಎತ್ತಿನ ಬಂಡಿಯಲ್ಲಿ ವಿವಿಧ ವೇಷ ಭೂಷಣ ಧರಿಸಿದ ಮಕ್ಕಳ ಮೆರವಣಿಗೆ ಹಾಗೂ ವಿವಿಧ ಕಲಾತಂಡಗಳ ನೃತ್ಯಗಳು ನೋಡುಗರ ಕಣ್ಮನ ಸೆಳೆದವು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಶಿಕ್ಷಣ ಸಂಯೋಜಕ ವ್ಹಿ.ಎಚ್. ಪುರೋಹಿತ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಅವಟಿ, ಉಪಾಧ್ಯಕ್ಷ ಪುಂಡಲೀಕ ಬೆಳ್ಳುಬ್ಬಿ, ಮಾರುತಿ ಪವಾರ, ಹೊನ್ನಪ್ಪ ಹಡಪದ, ಕಾಶೀಬಾಯಿ ಬಾಲಗೊಂಡ, ಉಮಾ ಲಿಂಬಿಕಾಯಿ, ಹಸೀನಾಬೆಗಂ ಕಂಕರಫೀರ, ಎಲ್.ಆರ್. ಕೆಲವಡಿ, ಆಯ್.ಎಂ. ಬಾಟಿ, ಟಿ.ಪಿ. ದಳವಾಯಿ, ಎಸ್.ಎಸ್. ಜಂಗಮಶೆಟ್ಟಿ, ಗೀತಾ ಕುಲಕರ್ಣಿ, ಜಲಜಾ ಹೊಸಮನಿ, ಎಸ್.ಎಂ. ಹಂಡಿ, ಕೃಷ್ಣಾ ರಜಪೂತ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ನಾಗರಾಜ ಬನಸೋಡೆ, ಆಯ್.ಸಿ. ಪಾಟೀಲ ಮತ್ತು ಐ.ಬಿ. ಹಾದಿಮನಿ ನಡೆಸಿ ಕೊಟ್ಟರು.
“ಈ ಕಲಿಕಾ ಹಬ್ಬದ ಜಾಥಾದಲ್ಲಿ ನಮ್ಮ ಸರ್ಕಾರಿ ಶಾಲೆಯ ಹೆಣ್ಣು ಮಕ್ಕಳ ನೃತ್ಯಗಳು ನೋಡಿದರೆ ಯಾವ ಶಾಲೆಗಳಿಗಿಂತ ಕಡಿಮೆಯಿಲ್ಲಾ ಎಂಬುದು ನಮ್ಮ ಹೆಮ್ಮೆ”
– ವಸಂತ ರಾಠೋಡ
ಕ್ಷೇತ್ರ ಶಿಕ್ಷಣಾಧಿಕಾರಿ, ಬಸವನ ಬಾಗೇವಾಡಿ

