ಹೆಚ್ ಡಿ ಕೋಟೆ ತಾಲೂಕು ಅಭಿವುದ್ಧಿಯತ್ತ ಸಾಗುತ್ತಿದೆಯಾ? | ಕಾಂಗ್ರೆಸ್ಸಿಗರೇ ಕೇಳುತ್ತಿರುವ ಪ್ರಶ್ನೆ
ಉದಯರಶ್ಮಿ ದಿನಪತ್ರಿಕೆ
ವರದಿ: ಶ್ರೀಕಂಠ ಈಶ್ವರ್
ಹೆಚ್ ಡಿ ಕೋಟೆ: ಅಪಾರ ವನಜನ ಸಂಪತ್ತು ಹೊಂದಿರುವ ಹೆಚ್ ಡಿ ಕೋಟೆ ತಾಲೂಕು ಕೊಂಚ ಮಟ್ಟಿಗೆಯಾದರೂ ಅಭಿವೃದ್ಧಿ ಕಂಡಿದ್ದೀಯಾ? ಶಾಸಕ ಅನಿಲ್ ಚಿಕ್ಕಮಾದು ಕೊಟ್ಟ ಭರವಸೆಗಳಲ್ಲಿ ಕೆಲ ಭರವಸೆಗಳನ್ನಾದರೂ ಈಡೇರಿಸಿದ್ದಾರಾ? ಎರಡು ಬಾರಿ ಗೆದ್ದು ಇತಿಹಾಸ ನಿರ್ಮಿಸಿರುವ ಶಾಸಕರು, ಮತದಾರರ ಋಣ ತೀರಿಸುವ ಪ್ರಯತ್ನ ಮಾಡುತ್ತಿದ್ದಾರಾ? ಇಲ್ಲ ನನಗೆ ಈ ಕ್ಷೇತ್ರದಲ್ಲಿ ವೋಟ್ ಬ್ಯಾಂಕ್ ಇದೆ. ವಿಪಕ್ಷಗಳು ವೀಕ್ ಆಗಿವೆ. ಯಾರು ಕೂಡ ನನ್ನ ವಿರುದ್ಧ ಧ್ವನಿಯೆತ್ತಿ ಮಾತನಾಡಲ್ಲ ಎಂದು ಜವಾಬ್ದಾರಿ ಮರೆತು ಕೇವಲ ಸಭೆ, ಸಮಾರಂಭ, ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದ್ದಾರಾ? ಇದು ನಾವಲ್ಲ, ಜನರೇ, ಅದರಲ್ಲಿ ಬಹುತೇಕ ಮಂದಿ ಕಾಂಗ್ರೆಸ್ಸಿಗರೇ ಕೇಳುತ್ತಿರುವ ಪ್ರಶ್ನೆ.
ಕಬಿನಿ ಡ್ಯಾಂನಿಂದ ಸದ್ದು ಮಾಡುತ್ತಿದ್ದ ಹೆಚ್ ಡಿ ಕೋಟೆ ಹಾಗೂ ಸರಗೂರು ತಾಲೂಕುಗಳನ್ನು ಒಳಗೊಂಡಿರುವ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರ, 2025ರಲ್ಲಿ ಹುಲಿ ದಾಳಿಯಿಂದ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡಿತ್ತು. ಪ್ರತಿ ಬಾರಿ ಹುಲಿ ದಾಳಿ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ಪರಿಹಾರ ನೀಡಿ ಬರುತ್ತಿದ್ದ ಶಾಸಕ ಅನಿಲ್ ಚಿಕ್ಕಮಾದು ಕೊಂಚ ಮಟ್ಟಿಗಾದ್ರೂ ಮಾನವ-ಕಾಡುಪ್ರಾಣಿ ಸಂಘರ್ಷಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ರಾ? ಮಾಡಿದ್ರೆ ಪದೇ ಪದೇ ಹುಲಿ ದಾಳಿ ಪ್ರಕರಣಗಳು ಮರಕುಳಿಸುತಿದ್ವಾ? ಅದನ್ನ ಮತದಾರರೇ ಪ್ರಶ್ನೆ ಮಾಡಬೇಕು.
ಕ್ಷೇತ್ರಕ್ಕೆ ಶಾಸಕರ ಕೊಡುಗೆ ಏನು?
ಹಾಗಾದ್ರೆ ಶಾಸಕ ಅನಿಲ್ ಚಿಕ್ಕಮಾದು ಕ್ಷೇತ್ರಕ್ಕೆ ಏನು ಮಾಡಿಲ್ವಾ? ಖಂಡಿತವಾಗಿಯೂ ಕ್ಷೇತ್ರಕ್ಕೆ ಕೆಲ ಕೆಲಸಕಾರ್ಯ ತಂದಿದ್ದಾರೆ. ಆದರೆ ಹೇಳಿಕೊಳ್ಳುವಂತ ಅಭಿವೃದ್ಧಿ ಆಗಿಲ್ಲ. ಇಷ್ಟು ದಿನ ಆಗಿರುವ ಅಭಿವೃದ್ಧಿ ಕಾರ್ಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿಯಾಗಬೇಕಿದೆ. ಕೆ.ಆರ್ ಎಸ್ ಮಾದರಿಯಲ್ಲಿ ಕಬಿನಿ ಉದ್ಯಾನವನ ನಿರ್ಮಾಣವಾಗಬೇಕಾಗಿದೆ. ಸವಾರರಿಂದ ದಿನನಿತ್ಯ ಹಿಡಿಶಾಪ ಕೇಳುತ್ತಿರುವ ಅಂತಾರಾಜ್ಯ ರಸ್ತೆಗಳು ಮೇಲ್ಜರ್ಜೆಗೇರಬೇಕಿವೆ. ಈಗಿರುವ ರಸ್ತೆ ಡಾಂಬರ್ ಮೇಲೆ ಮತ್ತೆ ಡಾಂಬರ್ ಹಾಕಿ ಕೈತೊಳೆದುಕೊಳ್ಳವುದಲ್ಲ. ಮೇಲ್ಜರ್ಜೆಗೇರಿಸಬೇಕಾದ ಅವಶ್ಯಕತೆಯಿದೆ. ಸಾರ್ವಜನಿಕ ಆಸ್ಪತ್ರೆಗೆ ಮೂಲಭೂತ ಸೌಕರ್ಯ ಕಲ್ಪಿಸಿ, ಹೈಟೆಕ್ ಟಚ್ ಕೊಡಬೇಕಾಗಿದೆ. ಅಧಿಕಾರಿಗಳಿಗೆ ಚುಟುಕುಮುಟ್ಟಿಸಿ, ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಿ ಅನ್ನದಾತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸದಂತೆ ಮಾಡಬೇಕಾಗಿದೆ. ಅರಣ್ಯ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿರುವ ಅರಣ್ಯ ಹಕ್ಕು ಪತ್ರಗಳನ್ನು ಕಾಡಿನ ಮಕ್ಕಳಿಗೆ ವಿತರಿಸಬೇಕಾಗಿದೆ. ಸಾಗುವಳಿ ಪತ್ರ ವಿತರಣೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಮಳೆ ನೀರು ಸಲೀಸಾಗಿ ಹರಿದುಹೋಗುವಂತೆ ಸಮರ್ಪಕ ಒಳಚರಂಡಿ ವ್ಯವಸ್ಥೆಮಾಡಬೇಕಾಗಿದೆ.
ಶಾಸಕರು ಮಾಡಬೇಕಾಗಿರುವ ಕೆಲಸಗಳು
ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆ..
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ(ಸಾಗರೆ) ತುರ್ತು ವಾಹನ ಒದಗಿಸುವುದು..
ಮೈಸೂರು-ಮಾನಂದವಾಡಿ ಅಂತರರಾಜ್ಯ ರಸ್ತೆ ಮೇಲ್ದರ್ಜೆಗೇರಿಸುವುದು..
ಅನ್ನದಾತರ ನೆಮ್ಮದಿ ಕಿತ್ತುಕೊಂಡಿರುವ ಸಾಗುವಳಿ ವಿತರಣೆಗೆ ಕ್ರಮ ಕೈಗೊಳ್ಳುವುದು..
ಕೆಂಚನಹಳ್ಳಿ ಮತ್ತು ಕೋಹಳ ಗ್ರಾಮಗಳಲ್ಲಿ ಜಮೀನು ವಿವಾದ ಬಗೆಹರಿಸುವುದು..
ಅರಣ್ಯ, ಕಂದಾಯ ಇಲಾಖೆಯೊಂದಿಗೆ ನಡೆಯುತ್ತಿರುವ ಸಂಘರ್ಷ ಇತ್ಯರ್ಥವಾಗಿಸುವುದು..
ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿ ಜನರಿಗೆ ಪುನರ್ವಸತಿ ಕಲ್ಪಿಸುವುದು..
ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡುವುದು..
ಎಸ್ ಎಸ್ ಎಲ್ ಸಿ ಫಲಿತಾಂಶ ಹೆಚ್ಚಳಕ್ಕೆ ತುರ್ತು ಕ್ರಮ ಕೈಗೊಳ್ಳುವುದು..
ಶಿರಮಳ್ಳಿ ಸಮೀಪವಿರುವ ಮೊರಾರ್ಜಿ ವಸತಿ ಶಾಲೆಗೆ ರಸ್ತೆ ಕಲ್ಪಿಸುವುದು..
ಸಮರ್ಪಕ ಒಳಚರಂಡಿ ವ್ಯವಸ್ಥೆ, ಮೂಲ ಸೌಕರ್ಯ ಒದಗಿಸುವುದು..
ಕಬಿನಿ ಜಲಾಶಯದ ಮುಂಭಾಗ ಕೆ.ಆರ್.ಎಸ್. ಮಾದರಿಯಲ್ಲಿ ಉದ್ಯಾನ ನಿರ್ಮಾಣ ಮಾಡುವುದು..
ತಾಲೂಕಿನಲ್ಲಿ ಡಿಪ್ಲೊಮಾ ಹಾಗೂ ಬಿಎಸ್‌ಸಿ ಕಾಲೇಜು ಪ್ರಾರಂಭಿಸುವುದು..
ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ಪತ್ರಿಕೋದ್ಯಮ ಕೋರ್ಸ್ ತೆರೆಯುವುದು..
ಗ್ರಾಮಾಂತರ ಪ್ರದೇಶಗಳಲ್ಲಿ ಸ್ಮಶಾನಕ್ಕೆ ಕಂದಾಯ ಇಲಾಖೆ ಜಾಗ ಗುರುತಿಸುವುದು..
ವರದರಾಜಸ್ವಾಮಿ ದೇಗುಲವನ್ನು ಅಭಿವೃದ್ಧಿಪಡಿಸಿ, ಪ್ರಸಿದ್ಧಿಗೆ ತರಲು ಕ್ರಮ ಕೈಗೊಳ್ಳುವಂತೆ ಮಾಡುವುದು..
ಕಬಿನಿ ಹಿನ್ನೀರು ಸಮೀಪವಿರುವ ಅಕ್ರಮ ರೆಸಾರ್ಟ್‌ಗಳನ್ನು ತೆರವುಗೊಳಿಸುವುದು..
ಹೆಚ್ ಡಿ ಕೋಟೆ ಪಟ್ಟಣದ ಸಮೀಪ ಗಾರ್ಮೆಂಟ್ ತೆರೆದು ಉದ್ಯೋಗ ಕಲ್ಪಿಸುವುದು..
ತಾಲೂಕಿನಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಚಿಕ್ಕಮಾದು ಅವರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್ ಅವರು ಈ ಜಿಲ್ಲೆಯವರೇ ಆಗಿರುವ ಹಿನ್ನೆಲೆ, ಅವರೂ ಸಹ ತಾಲೂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕಿದೆ.

