ಮುದ್ದೇಬಿಹಾಳ: ಪಟ್ಟಣ ಹಾಗೂ ನಾಲತವಾಡ ಗ್ರಾಮದಲ್ಲಿನ ಅಂಬೇಡ್ಕರ್ ವೃತ್ತವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಮುದ್ದೇಬಿಹಾಳ ಪಟ್ಟಣದ ಪುರಸಭೆ ಎದುರು ಕಾಯ್ದಿರಿಸಿದ ಜಾಗೆಯನ್ನು ದಲಿತರಿಗೆ ಮೀಸಲಿಡಬೇಕು, ಮೀನುಗಾರರ ಸಾಲ ಮನ್ನಾ ಮಾಡಬೇಕು, ಬಾರ್ ಮಾಲೀಕರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕಾರಣಕ್ಕಾಗಿ ಅಮಾನತ್ತುಗೊಂಡಿದ್ದ ಅಬಕಾರಿ ನಿರೀಕ್ಷಕಿ ಜ್ಯೋತಿಬಾಯಿ ಮೇತ್ರಿ ಅವರು ಮರಳಿ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವದು ಕಾನೂನು ಬಾಹಿರವಾಗಿದ್ದು ಇವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು, ತಾಲೂಕಿನ ಗಂಗೂರ ಗ್ರಾಮದ ರಿ.ಸ.ನಂ ೧೧/೨, ೧೧/೩, ೧೧/೪ ಈ ಜಮೀನುಗಳನ್ನು ಮಾದಿಗ ಸಮಾಜದ ಸ್ಮಶಾನಕ್ಕೆ ಸರ್ಕಾರ ಶೀಘ್ರವಾಗಿ ಖರೀದಿಸಿ ಕೊಡಬೇಕು, ಪಟ್ಟಣದಲ್ಲಿ ಡಾ|| ಬಾಬು ಜಗಜೀವನರಾಂ ಮೂರ್ತಿ ಪ್ರತಿಷ್ಠಾಪಿಸಬೇಕೆನ್ನುವ ಹಕ್ಕೊತ್ತಾಯಗಳನ್ನು ಮುಂದಿಟ್ಟು ವಿವಿಧ ದಲಿತಪರ ಸಂಘಟನೆಗಳ ವತಿಯಿಂದ ಅ.೧೧ ರಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಡಿಎಸ್‌ಎಸ್ ಮುಖಂಡ ಡಿ.ಬಿ.ಮುದೂರ ಮಾತನಾಡಿ, ತಾಲೂಕಿನ ಗಂಗೂರ ಗ್ರಾಮದ ಮಾದಿಗ ಸಮಾಜದ ಸ್ಮಶಾನ ಭೂಮಿಯನ್ನು ಕೂಡಲೇ ಖರೀದಿಸಿ ಸಮಾಜಕ್ಕೆ ಕೊಡಬೇಕು. ಪಟ್ಟಣದ ಪುರಭೆ ಎದುರು ಇರುವ ಜಾಗೆಯಲ್ಲಿ ಗ್ರಂಥಾಲಯ ನಿರ್ಮಿಸಬೇಕು ಹೀಗೆ ನಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ಆದಷ್ಟು ಬೇಗನೆ ಈಡೇರಿಸಬೇಕು. ಇಲ್ಲವಾದಲ್ಲಿ ದಿನೇ ದಿನೆ ಹೋರಾಟವನ್ನು ಉಗ್ರವಾಗಿಸುವದಾಗಿ ತಿಳಿಸಿದರು.
ಈ ವೇಳೆ ದುರ್ಗವ್ವ ಮಾದರ, ಗೋಪಾಲ ದಾಸರ, ಗಂಗಪ್ಪ ಮಾದರ, ಹುಲಗಪ್ಪ ಮಾದರ, ಹಣಮವ್ವ ಯಾತಗೇರಿ, ನಿಜವ್ವ ಮಾದರ, ರುದ್ರವ್ವ ಮಾದರ, ಶಿವಲಿಂಗವ್ವ ಮಾದರ, ರೇಣವ್ವ ಮಾದರ, ಬೀಯಪ್ಪ ಮಾದರ, ಯಮನಪ್ಪ ಮಾದರ, ಹಣಮಂತ ಕಟಗೂರ, ಶಿವಪ್ಪ ಮಾದರ, ಬಸವರಾಜ ಮಾದರ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment