ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ-ಮುದ್ದೇಬಿಹಾಳ ರಾಜ್ಯ ಹೆದ್ದಾರಿ ರಸ್ತೆ ಮಧ್ಯೆ ಆಲಮಟ್ಟಿ ಬಳಿ ನಿರ್ಮಿಸುತ್ತಿರುವ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಾಗಿ, ಬಂದ್ ಮಾಡಲಾಗಿರುವ ರಸ್ತೆಯನ್ನು ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಒಂದು ತಿಂಗಳಿAದ ರಸ್ತೆ ಸಂಪೂರ್ಣ ಬಂದ್ ಆದ ಕಾರಣ, ಸಾರ್ವಜನಿಕರು ಸುಮಾರು ನಾಲ್ಕು ಕಿ.ಮೀ ಸುತ್ತಿ ಬಳಿಸಿ ಹೋಗಬೇಕಿದೆ. ಇದರಿಂದ ಸುಮಾರು ೨೦ ಕ್ಕೂ ಹೆಚ್ಚು ಗ್ರಾಮಗಳ ಜನರಿಗೆ, ಆಲಮಟ್ಟಿಗೆ ಆಗಮಿಸುವ ಸಾರ್ವಜನಿಕರಿಗೆ ತೊಂದರೆಯಾಗಿದೆ.
ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗಲು ವಿದ್ಯಾರ್ಥಿಗಳು ಜನರು ಪರದಾಡುತ್ತಿದ್ದಾರೆ.
ಸೇತುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲಿಯವರೆಗೆ ದ್ವಿಚಕ್ರ ವಾಹನ ಸವಾರರಿಗಾದರೂ ಹಳೇ ಸೇತುವೆಯ ಮೇಲೆ ಹೋಗಲು ಅನುಕೂಲ ಕಲ್ಪಿಸಬೇಕು ಎಂದು ಬೇನಾಳದ ಮಹೇಶ ಗಾಳಪ್ಪಗೋಳ, ಆಲಮಟ್ಟಿಯ ವಿನಾಯಕ ಮಡಿವಾಳರ ಮತ್ತೀತರರು ಆಗ್ರಹಿಸಿದ್ದಾರೆ.
ರಸ್ತೆಗೆ ಅಡ್ಡಲಾಗಿ ದೊಡ್ಡ ದೊಡ್ಡ ಕಲ್ಲು ಮಣ್ಣಿನ ಒಡ್ಡು ಹಾಕಿದ್ದು, ದ್ವಿಚಕ್ರ ವಾಹನ ಸವಾರರು ಇದರ ಮೇಲೆಯೇ ಹತ್ತಿ ಆ ಬದಿ ಸಾಗುವ ಹರಸಾಹಸ ಮಾಡುತ್ತಿದ್ದಾರೆ.
ವಾರದೊಳಗೆ ದ್ವಿಚಕ್ರ ವಾಹನ ಸಂಚಾರಕ್ಕೆ ಅವಕಾಶ:
ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ನಡೆಯುತ್ತಿರುವ ರೈಲ್ವೆ ಮೇಲ್ಸೆತುವೆ ಕಾಮಗಾರಿ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಜಿ. ದೊಡಮನಿ, ಸೆಕ್ಶನ್ ಆಫೀಸರ್ ಸೋಮನಾಥ ಕುಳಗೇರಿ ಮಂಗಳವಾರ ಭೇಟಿ ನೀಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಕಾಮಗಾರಿ ನಿರ್ವಹಿಸುತ್ತಿರುವ ರೈಲ್ವೆ ಇಲಾಖೆಯ ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡರು.
ವಾರದೊಳಗೆ ಹಳೆ ಸೇತುವೆಯ ಮೇಲೆಯೆ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಎಸ್.ಜಿ. ದೊಡಮನಿ ತಿಳಿಸಿದರು.
