ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೋ:೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ವಾಟ್ಸಪ್ ನಲ್ಲಿ ಹತ್ತಾರು ಗುಂಪುಗಳು ಫೇಸ್ ಬುಕ್‌ನಲ್ಲಿ ಸಾವಿರಾರು ಸ್ನೇಹಿತರು, ಸಿನಿಮಾ, ಪಾರ್ಕ್ ಸುತ್ತಾಟಗಳ ನಡುವೆ ಮಾಡುವ ಕೆಲಸಕ್ಕೆ ಸಮಯವೇ ಸಿಗುತ್ತಿಲ್ಲ. ಒಂದು ವೇಳೆ ಮಾಡಲು ಆರಂಭಿಸಿದರೂ ಎಲ್ಲವೂ ಅರ್ಧಂಬರ್ಧ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಜಾಲದಲ್ಲಿ ಸಿಕ್ಕಿ ಹಾಕಿಕೊಂಡು ಹೊರ ಬರಲಾಗದೇ ಒದ್ದಾಡುವ ಬಹುತೇಕ ಯುವ ಜನತೆಯ ಪರದಾಟವಿದು. ಅವರಿಗೆ ಸಮಯ ನೋಡಲೂ ಸಮಯವಿಲ್ಲ. ಉಜ್ವಲ ಭವಿಷ್ಯ ರೂಪಿಸುವಂಥ ಕೆಲಸದಲ್ಲಿ ತೊಡುಗುವಂತೆ ಹಿರಿಯರು ಸಲಹೆ ನೀಡಿದರೆ ನನ್ನ ಒತ್ತಡವೇ ನನಗೆ ಸಾಕಾಗಿದೆ. ಅದಕ್ಕೆಲ್ಲ ಈಗ ಸಮಯವಿಲ್ಲ ಎಂದು ಒರಟಾಗಿ ನುಡಿಯುವ ಯುವ ಜನತೆಯ ಸಂಖ್ಯೆ ಹೆಚ್ಚುತ್ತಿದೆ. ಯಾವುದಕ್ಕೂ ಸಮಯ ಸಾಲುತ್ತಿಲ್ಲ ಎಂದು ನಾವೆಲ್ಲ ಗೊಣುಗುತ್ತಿರುವಾಗ ನೀವೇನು ಸಾಕಷ್ಟು ಸಮಯವಿದೆ ಬಳಸಿಕೊಳ್ಳಬೇಕಷ್ಟೆ ಅಂತಿದಿರಲ್ಲ ಎಂಬ ಅಚ್ಚರಿಯೇ? ಸಾಕಷ್ಟು ಸಮಯವಿಲ್ಲವೆಂದು ಹೇಳಬೇಡಿ, ಏಕೆಂದರೆ ಸ್ವಾಮಿ ವಿವೇಕಾನಂದ ಅಲ್ಬರ್ಟ್ ಐನ್‌ಸ್ಟೀನ್ ಮೇಡಮ್ ಕ್ಯೂರಿ ಸಿ ವಿ ರಾಮನ್ ಸರ್ ಎಮ್ ವಿಶ್ವೇಶ್ವರಯ್ಯನವರಿಗೆ ಸಮಯ ಎಷ್ಟಿತ್ತೋ ನಿಮಗೂ ಅಷ್ಟೇ ಸಮಯ ಇದೆ. ಹೌದಲ್ಲ, ಸಮಯ ಎಲ್ಲರಿಗೂ ಸಮಾನವಾಗಿದೆ. ಹಾಗಾದರೆ ಸಾಕಷ್ಟು ಸಮಯವಿಲ್ಲವೆಂದು ಹೇಳದೇ ಕಾರ್ಯನಿರ್ವಹಿಸಿ ಯಶ ಗಳಿಸುವುದು ಹೇಗೆ ಅಂತಿರೇನು? ಹಾಗಾದರೆ ಮುಂದಕ್ಕೆ ಓದಿ.
ನನ್ನ ಸಮಯ ಅಮೂಲ್ಯ

ಇತಿಹಾಸವನ್ನು ಸೃಷ್ಟಿಸಿದ ಸಾಧಕರಿಗೂ ದಿನಕ್ಕೆ ೨೪ ಗಂಟೆಗಳು ಮಾತ್ರ ಇದ್ದವು ಅದ್ಹೇಗೆ ಅವರು ನಮ್ಮಂತೆ ಕೆಲಸದೊಂದಿಗೆ ಗುದ್ದಾಡದೇ, ಲೀಲಾಜಾಲವಾಗಿ ಅಚ್ಚುಕಟ್ಟುತನದಿಂದ ಸಾಧಿಸಿದರು ಎನ್ನುವ ಪ್ರಶ್ನೆ ತಲೆ ಹೊಕ್ಕಿತೆ? ಅದಕ್ಕೆ ಉತ್ತರ ಬಹಳ ಸರಳವಾಗಿದೆ. ಅವರೆಲ್ಲ ತಮ್ಮ ಸಮಯ ಅಮೂಲ್ಯವೆಂದು ತಿಳಿದಿದ್ದರಷ್ಟೇ ಅಲ್ಲ. ಪಾಲಿಸುವುದನ್ನೂ ರೂಢಿಸಿಕೊಂಡಿದ್ದರು. ಆರೋಗ್ಯ, ಹಣ ಕಳೆದು ಹೋದರೆ ಮರಳಿ ಸಿಗುತ್ತದೆ. ಆದರೆ ಕಳೆದುಕೊಂಡದ್ದು ಸಮಯವಾದರೆ ಮರಳಿ ಪಡೆಯಲು ಸಾಧ್ಯವೇ ಇಲ್ಲ. ಬದುಕೊಂದು ಪುನರಾವರ್ತನೆಯ ಕಸರತ್ತು ಎಂದು ತಿಳಿದು ಸಮಯ ಕಳೆದರೆ ಯಾವುದೇ ಪ್ರಯೋಜನವಿಲ್ಲ. ನಿಮ್ಮ ಖಾತೆಯಲ್ಲಿ ಹೊಸ ದಿನದ ಹೆಸರಿನಲ್ಲಿ ಜಮೆ ಆದ ೮೬,೪೦೦ ಸೆಕೆಂಡ್ ಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದೇ ಜಾಣತನ. ಕೈಯಲ್ಲಿರುವ ಕಾಸನ್ನು ಬ್ಯಾಂಕಿನಲ್ಲಿಟ್ಟು ಮತ್ತೆ ಬೇಕಾದಾಗ ಉಪಯೋಗಿಸಿಕೊಳ್ಳುವಂತೆ ಟೈಂ ಬ್ಯಾಂಕಿನಲ್ಲಿ ಆ ವ್ಯವಸ್ಥೆಯಿಲ್ಲ. ಸಮಯವನ್ನು ನಿಲ್ಲಿಸಲಾಗುವುದಿಲ್ಲ. ಸಮಯ ಹಾರಿ ಹೋಗುತ್ತದೆ. ನೀವು ಚಾಲಕರಾಗಿರುತ್ತಿರೋ?(ನಿಯಂತ್ರಿಸುವವರು) ಪ್ರಯಾಣಿಕರಾಗಿರುತ್ತಿರೋ?(ಕಾಲ ಗರ್ಭದಲ್ಲಿ ಸೇರಿ ಹೋಗುವವರು) ಎಂಬ ಮಾತು ಇಂಗ್ಲೀಷಿನಲ್ಲಿ ಚಾಲ್ತಿಯಲ್ಲಿದೆ. ಚಾಲಕರಾದವರು ಸಾಧಕರಾಗುತ್ತಾರೆ ಎಂದು ಒತ್ತಿ ಹೇಳುವ ಅವಶ್ಯಕತೆಯಿಲ್ಲ. ಆಳವಾದ ನೀರಿನಲ್ಲಿ ಮುಳುಗಿದವನಿಗೆ ಮಾತ್ರ ಮುತ್ತು ದೊರೆಯುತ್ತದೆ. ದಂಡೆಯಲ್ಲಿ ಕುಳಿತವನು ಬರಿಗೈಯಲ್ಲಿ ಮರಳಬೇಕಾಗುತ್ತದೆ. ಸಮಯವನ್ನು ದುರುಪಯೋಗ ಮಾಡುತ್ತಿದ್ದರೆ ಅದರ ಬೆಲೆಯನ್ನೂ ನೀವೇ ಕಟ್ಟಬೇಕಾಗುತ್ತದೆ. ಆ ಬೆಲೆ ಕೆಲವು ಬಾರಿ ಅಧಿಕವಾಗಿರಬಹುದು ಜೋಕೆ!
ಪಾರ್ಕಿನ್ಸನ್‌ನ ಸೂತ್ರ
ಸಮಯವನ್ನು ವ್ಯಯಿಸುವಲ್ಲಿ ಒಂದು ಶಿಸ್ತು ಇಲ್ಲದೇ ಹೋದರೆ ಅದು ಜೀವನದಲ್ಲಿ ನಮಗೆ ನಾವೇ ಮಾಡಿಕೊಳ್ಳುವ ದೊಡ್ಡ ಹಾನಿಯೇ ಸರಿ.ಸಮಯವೇ ಜೀವನ. ಸಮಯ ನಿರ್ವಹಣೆಯೆಂದರೆ ಮಾಡುವ ಕೆಲಸವನ್ನು ಬೇಗ ಬೇಗನೆ ಮುಗಿಸುವುದಲ್ಲ. ಮಾಡಬೇಕಾದ ಮುಖ್ಯವಾದ ಕೆಲಸವನ್ನು ಮಾಡಬೇಕಾದ ಸಮಯದಲ್ಲಿ ಪೂರ್ತಿ ಮಾಡುವುದು. ಒಂದು ಕೆಲಸ ಮಾಡಲು ಎಷ್ಟು ಸಮಯ ಕೊಟ್ಟರೆ ಅಷ್ಟೇ ಸಮಯ ತೆಗೆದುಕೊಳ್ಳುತ್ತೇವೆ. ಆ ಸಮಯಕ್ಕಿಂತ ಮುಂಚೆಯೇ ಮಾಡುವುದಿಲ್ಲ. ಇದು ಪಾರ್ಕಿನ್ಸನ್‌ನ ಸೂತ್ರ. ನಿಜ, ಮಾಡುವ ಕೆಲಸಕ್ಕೆ ನಿಗದಿಗೊಳಿಸಿದ ಸಮಯದವರೆಗೆ ಕಾದು ಕೊನೆಗೆ ಕೆಲಸ ಪ್ರಾರಂಭಿಸುವುದು ಬಹುತೇಕ ಜನರ ಚಟ. ಈ ಚಟ ಒತ್ತಡವನ್ನು ತಂದೊಡ್ಡುತ್ತದೆ ಅಲ್ಲದೇ ಕೆಲಸದ ಗುಣಮಟ್ಟವನ್ನೂ ಹಾಳುಗೆಡುವುತ್ತದೆ. ನಿಗದಿತ ಸಮಯದೊಳಗೆ ಕೆಲಸ ಮುಗಿಯುವ ಹಾಗೆ ನೋಡಿಕೊಂಡರೆ ಒತ್ತಡರಹಿತರಾಗುತ್ತೇವೆ. ಗೆಲುವು ನಮ್ಮ ಕೈ ಹಿಡಿಯುತ್ತದೆ.
ಸಮಯ ಯೋಜನೆ
ದಿನ ನಿತ್ಯ ಮಾಡಲೇಬೇಕಾದ ಅನೇಕ ಕೆಲಸ ಕಾರ್ಯಗಳಿಗೆ ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವುದು ಒಂದು ಕಲೆಯೇ ಸರಿ. ಈ ಕಲೆ ಕರಗತ ಮಾಡಿಕೊಳ್ಳದಿದ್ದರೆ ಬರಬರುತ್ತ ಬದುಕು ಹತಾಶೆಯತ್ತ ಹೆಜ್ಜೆ ಹಾಕಲು ಶುರು ಹಚ್ಚಿಕೊಳ್ಳುತ್ತದೆ. ಹತಾಶಾ ಭಾವದಿಂದ ತಪ್ಪಿಸಿಕೊಳ್ಳಲು ವಿವಿಧ ಬಗೆಗಳಲ್ಲಿ ಪ್ರಯತ್ನಿಸುತ್ತೀರಿ. ಊಹ್ಞೂಂ ಫಲ ನೀಡುವುದಿಲ್ಲ. ಇಲ್ಲಿ ಸಮಯ ಯೋಜನೆ ಮುಖ್ಯವಾಗಿರುತ್ತದೆ. ಎಂಬುದು ತಲೆಗೆ ಹೊಳೆದಾಗ ಹತಾಶೆ ದೂರ ಓಡುತ್ತದೆ. ಯೋಜನೆಗೋಸ್ಕರ ಖರ್ಚು ಮಾಡುವ ೧ ಗಂಟೆ ಕಾಲ ಕಾರ್ಯಾನುಷ್ಟಾನದಲ್ಲಿ ೧೦ ಗಂಟೆಗಳನ್ನು ಉಳಿಸುತ್ತದೆ. ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ತಗಲುವ ಸಮಯವನ್ನು ಯೋಜಿಸಿಕೊಂಡರೆ ಉತ್ತಮ ಫಲಿತಾಂಶ ನೀಡುವುದು. ಹೆಚ್ಚಿನ ಸಂದರ್ಭದಲ್ಲಿ ಕೆಲಸ ಪೂರ್ತಿಗೊಳಿಸಲು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಮಯ ತಗಲಬಹುದು. ಅನೇಕ ಸಾರಿ ದುತ್ತನೇ ಏನೇನೋ ಬೇರೆ ಕೆಲಸಗಳು ಬಂದು ನಿಲ್ಲುತ್ತವೆ ಇಲ್ಲವೇ ಇತರರು ಇನ್ನಾವುದೋ ಅಮುಖ್ಯ ಕೆಲಸಕ್ಕೆ ನಿಮ್ಮನ್ನು ಆಹ್ವಾನಿಸಬಹುದು. ಆಗ ದೃಢ ಮನಸ್ಸಿನಿಂದ ‘ಇಲ್ಲ’ ಈಗ ನನ್ನಿಂದಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುವುದು ಮಹತ್ವದ್ದೆನಿಸುತ್ತದೆ.
ಇರಲಿ ಮನರಂಜನೆ

ಮೂರು ಹೊತ್ತು ಕೆಲಸ ಕೆಲಸ ಎಂದು ಕೆಲಸಗಳಿಗೆ ಪ್ರಾಮುಖ್ಯತೆ ನೀಡಿದರೆ ಏನಾಗುತ್ತದೆ? ಮನಸ್ಸು ರೋಸಿ ಹೋಗುತ್ತದೆ. ಬಿಡುವಿಲ್ಲದೇ ಕೆಲಸದಲ್ಲಿದ್ದರೆ ಮನಸ್ಸು ಅದರಿಂದ ಪಾರಾಗಲು ನೋಡುತ್ತಿರುತ್ತದೆ. ಮನರಂಜನೆ ಅನ್ನೋದು ಸಮಯ ವ್ಯರ್ಥ ಅಲ್ಲ. ವಾಸ್ತವದಲ್ಲಿ ಮನಸ್ಸಿಗೆ ಆಗಾಗ ಚಿಕ್ಕ ವಿರಾಮ ಬೇಕು. ಚಿಕ್ಕ ನಿದ್ದೆ ನಿಮ್ಮ ಮನಸ್ಸು ಮುಂದಿನ ಹಲವು ಗಂಟೆಗಳವರೆಗೆ ಕೆಲಸ ಮಾಡುವಂತೆ ಪುನಶ್ಚೇತನಗೊಳಿಸುತ್ತದೆ. ಚೇತೋಹಾರಿಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಸಿದರೆ, (ಹೊಸ ಸ್ಥಳಗಳಿಗೆ ಪ್ರವಾಸ, ಸಂಗೀತ ಆಲಿಸುವಿಕೆ ಸಿನಿಮಾ, ಸಾಹಿತ್ಯದ ಓದು ಇತ್ಯಾದಿ) ಮನಸ್ಸು ಮತ್ತೆ ಕೆಲಸಕ್ಕೆ ಮರಳಲು ಸಿದ್ಧವಾಗುತ್ತದೆ. ರಂಜಿಸಿದ ಮನಸ್ಸು ಉತ್ತಮ ಗುಣಮಟ್ಟದ ಕಾರ್ಯ ನೀಡುವಲ್ಲಿ ಸಫಲವಾಗುತ್ತದೆ. ಅಲ್ಲದೇ ಕೆಲಸವನ್ನು ಸರಿಯಾದ ದಿಕ್ಕಿನಲ್ಲಿ ಕರೆದೊಯ್ಯುತ್ತದೆ ಎನ್ನುವುದನ್ನು ಮರೆಯಬಾರದು. ಮನರಂಜನೆಯ ಹೆಸರಿನಲ್ಲಿ ಅತಿಯಾದ ಟಿವಿ ವೀಕ್ಷಣೆ ವಿಡಿಯೋ ಗೇಮ್ಸ್ ಸಲ್ಲದು.
ಪೂರ್ವ ಸಿದ್ಧತೆ
ಸಾಕಷ್ಟು ಪೂರ್ವ ಸಿದ್ಧತೆ ಇಲ್ಲದೇ ಕಾರ್ಯದಲ್ಲಿ ತೊಡಗಿದರೆ ಸಮಯವೆಂಬ ಸಂಪನ್ಮೂಲದ ಅಪವ್ಯಯವೇ ಸರಿ. ಪೂರ್ವ ಸಿದ್ಧತೆಯಿಲ್ಲದೇ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚಿನ ಸಂದರ್ಭಗಳಲ್ಲಿ ವ್ಯತಿರಿಕ್ತ ಫಲಿತಾಂಶಗಳಲ್ಲಿ ಕೊನೆಗೊಳ್ಳುತ್ತದೆ. ನಾಳೆಯ ದಿನಕ್ಕಾಗಿ ಉತ್ತಮ ಸಿದ್ಧತೆ ಯಾವುದೆಂದರೆ ಇಂದಿನ ದಿನವನ್ನು ಅಚ್ಚುಕಟ್ಟಾಗಿ ಕಳೆಯುವುದಾಗಿದೆ ಎನ್ನುತ್ತಾರೆ. ಎಚ್ ಜಾಕ್ಸನ್ ಬ್ರೌನ್.
ಮುಂದೂಡದಿರಿ
ಜನ ನನ್ನ ಬಗ್ಗೆ ಏನೆಂದು ಕೊಳ್ಳುತ್ತಿದ್ದಾರೋ? ಎಂಬ ಒಣ ಚಿಂತೆಯಲ್ಲಿ ನೀವು ಮಾಡಲೇಬೇಕಾದ ಕೆಲಸಗಳನ್ನು ಮುಂದೂಡಬೇಡಿ. ಬಹುಶಃ ಅವರು ನಿಮ್ಮ ಬಗ್ಗೆ ವಿಚಾರ ಮಾಡುತ್ತಿಲ್ಲವೇನೋ? ಸಮಯದ ಬಗ್ಗೆ ನಿಮಗಿರುವ ಮನೋವೃತ್ತಿ ನಿಮ್ಮ ನಡುವಳಿಕೆ, ನೀವು ಮಾಡುವ ಕೆಲಸಗಳ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ.ಮೊದಲೇ ಸಿದ್ದ ಮಾಡಿದ ಮುಖ್ಯವಾದ ಕೆಲಸಗಳು ಎಷ್ಟೇ ಕ್ಲಿಷ್ಟವಾಗಿರಲಿ ಶಕ್ತಿ ಸಾಮರ್ಥ್ಯ ಪ್ರತಿಭೆ ಉಪಯೋಗಿಸಿ ಮಾಡಿ ಬಿಡಬೇಕು. ಮುಂದೂಡಬಾರದು. ಗುರಿಗೆ ಸಹಕಾರಿಯಾದ ಕೆಲಸಗಳನ್ನು ಮಾಡಿ ಮುಗಿಸಿದಾಗ ನಿಮ್ಮ ಮೇಲೆ ನಿಮಗೆ ಹೆಮ್ಮೆ ಮತ್ತು ಸಂತೃಪ್ತಿ ಭಾವ ಚಿಗುರುತ್ತವೆ. ಈ ಹೆಮ್ಮೆ ನಿಮ್ಮ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಉನ್ನತ ಸ್ಥಾನಕ್ಕೇರಲು ಸಮಯನಿರ್ವಹಣೆಯಂಥ ಮೆಟ್ಟಿಲನ್ನು ಕಡೆಗಣಿಸಿ ಕೊರಗದಿರಿ.


