ಉದಯರಶ್ಮಿ ದಿನಪತ್ರಿಕೆ
ವರದಿ: ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಸ್ವಚ್ಛ ಸುಂದರ ಪಟ್ಟಣ ನಮ್ಮ ಕನಸು ಪರಿಕಲ್ಪನೆಯೊಂದಿಗೆ ಸ್ಥಳೀಯ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕವು ವಿನೂತನ ಪೈಪ್ ಕಾಂಪೋಸ್ಟಿಂಗ್ ವಿಧಾನ ಯೋಜನೆಯನ್ನು ವೀರಭದ್ರೇಶ್ವರ ನಗರದಲ್ಲಿ ಅನುಷ್ಠಾನ ಮಾಡುವ ಈ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಡಿ ಮನೆ ಹತ್ತಿರ ಪುರಸಭೆ ಅಳವಡಿಸಲಾಗುವ ಪೈಪ್ ನಲ್ಲಿ ಆಯಾ ಮನೆಯವರು ತಮ್ಮಲ್ಲಿರುವ ಬೇಡವಾದ ತರಕಾರಿ, ಸೋಸಿದ ತೊಪ್ಪಲು ಪಲ್ಲ್ಯೆ ಕಸ, ಇದರಲ್ಲಿ ಹಾಕಬೇಕು. ನಂತರ ಸಗಣಿ ನೀರು ಇಲ್ಲವೇ ಬೆಲ್ಲದ ನೀರು ಇದರಲ್ಲಿ ಸುರಿಯಬೇಕು. 45 ದಿನಗಳ ನಂತರ ಇದು ಸಾವಯವ ಗೊಬ್ಬರವಾಗಿ ತಯಾರು ಆಗುತ್ತದೆ. ಆಯಾ ಮನೆಯವರು ಈ ಸಾವಯವ ಗೊಬ್ಬರವನ್ನು ತಮ್ಮ ಮನೆ ಸುತ್ತಮುತ್ತ ಇರುವ ಗಿಡ-ಮರಗಳಿಗೆ ಗೊಬ್ಬರವಾಗಿ ಬಳಕೆ ಮಾಡಬಹುದು.
ಈ ಯೋಜನೆಯ ಉಸ್ತುವಾರಿಯನ್ನು ಸಮುದಾಯದ ಸಂಘಟಿಕರಾದ ವಿದ್ಯಾ ರವಿ ಮಸಬಿನಾಳ, ರೇಖಾ ನಾಗಪ್ಪ ಭಜಂತ್ರಿ, ಹೇಮಾ ಸರೋಜಿನಿ ಹೊಸಮನಿ, ಕವಿತಾ ಮನೋಜಕುಮಾರ ರಜಪೂತ, ಭಾಗೀರಥಿ ರಮೇಶ ಕೊಂಡಗುಳಿ ನೋಡಿಕೊಳ್ಳುವರು.
ಈ ಕುರಿತು ಪುರಸಭೆ ಆರೋಗ್ಯ ನಿರೀಕ್ಷಕರಾದ ವಿಜಯಕುಮಾರ ವಂದಾಲ, ಮಹೇಶ ಹಿರೇಮಠ, ಬಸವರಾಜ ಬೋಳಶೆಟ್ಟಿ ಅವರು ಮಾತನಾಡಿ, ಮನೆಯ ತ್ಯಾಜ್ಯವನ್ನು ಮನೆಯಂಗಳದಲ್ಲಿಯೇ ಸುಲಭವಾಗಿ ಕರಗಿಸಿ ಉತ್ಕೃಷ್ಟ ಗೊಬ್ಬರ ತಯಾರಿಸುವ ಪೈಪ್ ಕಾಂಪೋಸ್ಟಿಂಗ್ ಪದ್ದತಿ. ಇದನ್ನು ಡಿ.15 ರಿಂದ ಆರಂಭಿಸಲಾಗಿದೆ. ಆರು ಪೂಟ್ ಪೈಪ್ ಇದೆ. ಮನೆಯವರು ಹಸಿ ಕಸದೊಂದಿಗೆ ಸೆಗಣಿ ನೀರು ಹಾಗೂ ಬೆಲ್ಲದ ನೀರು ನಿಯಮಿತವಾಗಿ ಈ ಪೈಪ್ ನಲ್ಲಿ ಹಾಕುತ್ತಾ ಬಂದರೆ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದರ ಉಸ್ತುವಾರಿ ಮಾಡಲು ಐದು ಜನ ಸಮುದಾಯದ ಸಂಘಟಕರು ಇದ್ದಾರೆ. ಇವರು ಮೂರು ವರ್ಷದ ಕಾಲಾವಧಿಯವರೆಗೂ ಕಾರ್ಯನಿರ್ವಹಿಸುತ್ತಾರೆ. ಈಗಾಗಲೇ ವೀರಭದ್ರೇಶ್ವರ ನಗರದಲ್ಲಿ ಇದುವರೆಗೂ ವಿವಿಧೆಡೆ 30 ಪಿವಿಎಸ್ ಪೈಪ್ ಅಳವಡಿಸಲಾಗಿದೆ. ನಂತರ ಪಟ್ಟಣದ ಕೇಶವ ನಗರ, ನಂದಿ ಬಡಾವಣೆ ಸೇರಿದಂತೆ ಪಟ್ಟಣದಲ್ಲಿ ಈ ಪೈಪ್ ಅಳವಡಿಸಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾತನಾಡಿ, ಪಟ್ಟಣದ ನಾಗರಿಕರು ಸ್ವಚ್ವತೆಗೆ ಆದ್ಯತೆ ನೀಡಬೇಕು. ಮನೆಯ ಹಸಿ ತ್ಯಾಜ್ಯ ಪೈಪ್ ಕಾಂಪೋಸ್ಟಿಂಗ್ ನಲ್ಲಿ ಸುರಿಯುವದನ್ನು ರೂಢಿಸಿಕೊಳ್ಳಬೇಕು. ಪರಿಸರ ಮಾಲಿನ್ಯದಿಂದಾಗಿ ಅನಾರೋಗ್ಯಕರ ವಾತಾವರಣ ತಪ್ಪಿಸುವ ನಿಟ್ಟಿನಲ್ಲಿ ಪೈಪ್ ಕಾಂಪೋಸ್ಟಿಂಗ್ ವಿಧಾನ ಪ್ರಯೋಜನಕಾರಿಯಾಗಲಿದೆ. ಪಟ್ಟಣದಲ್ಲಿ ಈ ಯೋಜನೆಯ ಪ್ರಯೋಜನವನ್ನು ಜನತೆ ಪಡೆದುಕೊಳ್ಳುವ ವಿಶ್ವಾಸವಿದೆ ಎಂದರು.

