ಹೆಚ್ ಡಿ ಕೋಟೆ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಇರೋದಿಲ್ಲ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಲ್ಲುವವರು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಿ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಕರೆ ನೀಡಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಹೆಚ್ ಡಿ ಕೋಟೆ -ಸರಗೂರು ತಾಲೂಕಿನ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳ ಬಳಗದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇರಲ್ಲ ಎಂದು ಎರಡು ಬಾರಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇರೋದಿಲ್ಲ. ಎಲ್ಲಿಯವರೆಗೆ ಈ ಮೈತ್ರಿ ಮುಂದುವರೆಯುತ್ತೆ ಎಂಬುದು ಕೂಡ ಗೊತ್ತಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವವರು ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟಿಸುವತ್ತ ಗಮನಹರಿಸಬೇಕು. ಮೈತ್ರಿ ಇದೆ ಅಂತೇಳಿ ಮೈಮರೆತು ಕುಳಿತುಕೊಂಡರೆ ನಿಮಗೆ ಕಷ್ಟವಾಗಲಿದೆ.
ಈ ಬಾರಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆಡಿಎಸ್ ನಾಲ್ಕು ಕ್ಷೇತ್ರ ಗೆಲ್ಲಬಹುದು. ಈ ಹಿಂದೆ ಸ್ವತಂತ್ರವಾಗಿ ನಿಂತು ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಗೆದ್ದಿರುವ ಇತಿಹಾಸ ಇದೆ. ಈ ಬಾರಿಯೂ ಕನಿಷ್ಠ ನಾಲ್ಕು ಕ್ಷೇತ್ರ ಗೆಲ್ಲುವ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ಕೊಡಿ. ಮೈತ್ರಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಖಡಾಖಂಡಿತವಾಗಿಯೂ ಈ ಬಾರಿ ಮೈತ್ರಿ ಇರುವುದಿಲ್ಲ. ಮಾರ್ಚ್, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ಬರಬಹುದು. ಚುನಾವಣೆ ಎದುರಿಸಲು ಎಲ್ಲರೂ ಸಿದ್ಧರಾಗಿರಿ. ಪಕ್ಷದಿಂದ ದೂರ ಸರಿದಿರುವ ಸಮುದಾಯಗಳನ್ನು ಮತ್ತೆ ಪಕ್ಷಕ್ಕೆ ಕರೆತರುವ ಕೆಲಸ ಮಾಡಿ. ಪಕ್ಷದೊಳಗೆ ಇರುವ ಸಮುದಾಯದ ಮುಖಂಡರ ಮೂಲಕ, ಆಯಾಯ ಸಮುದಾಯದವರನ್ನು ಪಕ್ಷಕ್ಕೆ ಕರೆತನ್ನಿ. ಒಂದೇ ಸಮುದಾಯಕ್ಕೆ ಜೆಡಿಎಸ್ ಸೀಮಿತವಾಗಿದೆ ಎಂಬ ವಿಪಕ್ಷಗಳ ಆರೋಪವನ್ನು ಸುಳ್ಳುಮಾಡಿ ಎಂದು ಕಾರ್ಯಕರ್ತರಿಗೆ ಕೆ.ಎಂ. ಕೃಷ್ಣನಾಯಕ ಮನವಿ ಮಾಡಿದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷರಾದ ರಾಜೇಂದ್ರ, ಗೋಪಾಲಸ್ವಾಮಿ, ಹೆಚ್ ಡಿ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ರವಿಕುಮಾರ್, ನಿಖಿಲ್ ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಎಂ.ಆರ್. ಹರೀಶ್ ಸೇರಿದಂತೆ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಮತ್ತೆ ಹೆಚ್ ಡಿ ಕೋಟೆಗೆ ನಿಖಿಲ್
ಜೆಡಿಎಸ್ ಸದಸ್ಯತ್ವ ಅಭಿಯಾನ ಅಂಗವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಹೆಚ್ ಡಿ ಕೋಟೆ ತಾಲೂಕಿಗೆ ಆಗಮಿಸಲಿದ್ದಾರೆ. ಈ ವೇಳೆ ಸರಿಸುಮಾರು 10 ಸಾವಿರ ಮಹಿಳೆಯರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಜೆಡಿಎಸ್ ಸದಸ್ಯತ್ವ ನೋಂದಣಿ ಮಾಡಿಸಬೇಕು. ಅವರನ್ನೇ ವೇದಿಕೆ ಮೇಲೆ ಕೂರಿಸಿ ಇತಿಹಾಸ ಸೃಷ್ಟಿಸಬೇಕು. ರಾಜ್ಯದಲ್ಲಿ ಎಲ್ಲೂ ಕೂಡ ಬರೀ ಮಹಿಳೆಯರನ್ನೇ ಕರೆತಂದು ಸದಸ್ಯತ್ವ ನೋಂದಣಿ ಮಾಡಿಸಿಲ್ಲ. ಎಲ್ಲ ಕಡೆಯೂ ಪುರುಷರೇ ಅತಿಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿಯಾಗಿದ್ದಾರೆ. ಆದರೆ ನಾವು 10 ಸಾವಿರ ಮಹಿಳೆಯರನ್ನು ವೇದಿಕೆ ಮೇಲೆ ಕೂರಿಸಿ, ಇತಿಹಾಸ ಸೃಷ್ಟಿ ಮಾಡಬೇಕು ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ಕರೆ ನೀಡಿದರು.
ಮತಪಟ್ಟಿ ಪರಿಷ್ಕರಣೆಯಿಂದ ದಳಕ್ಕೆ ಲಾಭ
ಮತದಾರರ ಮಾಹಿತಿ ಸಂಗ್ರಹ ಮತ್ತು ಗುರುತಿನ ಚೀಟಿ ಪರಿಷ್ಕರಣೆ ವೇಳೆ ಬೂತ್ ಮಟ್ಟದ ಕಾರ್ಯಕರ್ತರು ಹದ್ದಿನ ಕಣ್ಣಿಟ್ಟಿರಬೇಕು. ಈ ಹಿಂದೆ ಬೇರೆ ಜಿಲ್ಲೆ, ಬೇರೆ ರಾಜ್ಯದವರು ಕೆಲಸ ಕಾರ್ಯಗಳಿಗೆ ಆಗಮಿಸಿ, ಇಲ್ಲಿ ಮತ ಚಲಾಯಿಸಿರುವ ಉದಾರಣೆಗಳಿವೆ. ಅಂತಹವರನ್ನು ಪತ್ತೆ ಮಾಡಿ ಅಧ್ಯಕ್ಷರಿಗೆ, ಮುಖಂಡರಿಗೆ ಮಾಹಿತಿ ನೀಡಬೇಕು. ನಾವು ಅದನ್ನು ಡಿಲೀಟ್ ಮಾಡಿಸುವ ಕೆಲಸ ಮಾಡುತ್ತೇವೆ. ಈ ರೀತಿ ಮಾಡುವುದರಿಂದ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಮತಗಳು ಕಡಿಮೆಯಾಗುತ್ತೆ. ಇದರಿಂದ ಜೆಡಿಎಸ್ ಹೆಚ್ಚಿನ ಅನುಕೂಲವಾಗಲಿದೆ ಎಂದು ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ವಿಶ್ವಾಸ ವ್ಯಕ್ತಪಡಿಸಿದರು.

