ಉದಯರಶ್ಮಿ ದಿನಪತ್ರಿಕೆ
ಚಡಚಣ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಲೋಣಿ ಬಿ.ಕೆ. ವಲಯದ ಜಿಗಜಿವಣಿ ಸಮೀಪದ ಲಮಾಣಿಹಟ್ಟಿ ಗ್ರಾಮದಲ್ಲಿ ಜಾನುವಾರು ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪಶು ವೈದ್ಯ ಡಾ. ರೋಹನ್ ಬಿರಾದಾರ ಅವರು ಸುಮಾರು 30 ಜಾನುವಾರುಗಳಿಗೆ ಗರ್ಭಪರೀಕ್ಷೆ, ಜಂತು ನಿವಾರಣ ಔಷಧೋಪಚಾರ, ಕಾಲುಬೇನೆ–ಬಾಯಿಬೇನೆ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡಿದರು. ಜೊತೆಗೆ ಹಾಲಿನ ಉತ್ಪಾದನೆ ಹೆಚ್ಚಿಸಲು ಮಿನರಲ್ ಮಿಕ್ಸರ್ ಬಳಕೆ, ಜಾನುವಾರುಗಳಿಗೆ ನೀಡಬೇಕಾದ ವ್ಯಾಕ್ಸಿನ್‌ಗಳ ಮಹತ್ವ ಕುರಿತು ರೈತರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಿನ ಕೃಷಿ ಮೇಲ್ವಿಚಾರಕ ಸುದೀಪ ಎಸ್.ಕೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಕಾರ್ಯಕ್ರಮದಡಿಯಲ್ಲಿ ರೈತರ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಹಾಗೂ ಜಾಗೃತಿ ನೀಡಲಾಗುತ್ತಿದೆ ಎಂದರು. ರೈತ ಕ್ಷೇತ್ರ ಪಾಠಶಾಲೆಗಳ ಮೂಲಕ ಹೈನುಗಾರಿಕೆ ತರಬೇತಿ, ಕೃಷಿಯಲ್ಲಿ ನೀರಾವರಿ ವಿಧಾನಗಳು, ಮಣ್ಣು ಪರೀಕ್ಷೆ, ಮಳೆನೀರು ಕೊಯ್ಲು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ರೈತರ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ವಲಯದ ಮೇಲ್ವಿಚಾರಕ ಮಹಾಂತೇಶ ವಿ.ಎ. ಮಾತನಾಡಿ ಧರ್ಮಸ್ಥಳ ಯೋಜನೆಯು ಹೈನುಗಾರಿಕೆ, ಕೃಷಿ ಚಟುವಟಿಕೆಗಳು ಮತ್ತು ಸ್ವ-ಉದ್ಯೋಗಗಳಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯ ಒದಗಿಸುತ್ತಿದ್ದು, ಹಾಲು ಡೈರಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಸೇವಾಪ್ರತಿನಿಧಿ ಲಕ್ಷ್ಮಿ ಮಠಪತಿ ಸ್ವಾಗತಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ರೈತರಾದ ಸವಿತಾ ಬಿರಾದಾರ, ಅನಿತಾ ಬಿರಾದಾರ, ಕೊಂತೇವ್ವಾ ಬಿರಾದಾರ, ಜನಗೊಂಡು ಬಿರಾದಾರ, ಅಮಾಸಿದ್ದ ಬಿರಾದಾರ, ಮಹದೇವ ಬಿರಾದಾರ, ಸೋಮಶೇಖರ ಬಿರಾದಾರ ಸೇರಿದಂತೆ ರೈತರು ಭಾಗವಹಿಸಿದ್ದರು.

