ಅಧಿಕಾರಿಗಳಿಗೆ ಜಿಪಂ ಸಿಇಓ ರಾಹುಲ್ ಶಿಂಧೆ ಸೂಚನೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿಗೆ ಧಿಡೀರ ಭೇಟಿ ನೀಡಿ, ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ದ್ರಾಕ್ಷಿ,ದಾಳಿಂಬೆ,ಲಿAಬೆ) ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಲಾಭವನ್ನು ಜಿಲ್ಲೆಯ ಅರ್ಹ ರೈತರಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಮತ್ತು ರೈತರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಿಜಯಪುರ ಜಿಲ್ಲೆಯ ೧೨ ತಾಲೂಕುಗಳನ್ನು ಬರ ಘೋಷಣೆಯಾದ ಹಿನ್ನೆಲೆಯಲ್ಲಿ ರೈತರು ವಲಸೆ ಹೋಗದಂತೆ ತಡೆಯಲು ಹಾಗೂ ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗುರಿಗಿಂತ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು.
ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯ ನಿರ್ವಹಣೆ ಹಾಗೂ ಹೊಸ ಪ್ರದೇಶ ವಿಸ್ತರಣೆ ಮತ್ತು ವಿನೂತನ ತಂತ್ರಜ್ಞಾನ ಕಾರ್ಯಕ್ರಮಗಳಡಿ, ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಹಾಗೂ ಪ್ರಸಕ್ತ ಸಾಲಿಗೆ ವಿವಿಧ ಯೋಜನೆಗಳಡಿ ಸ್ವೀಕರಿಸಿರುವ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರಿಯಾದ ಸಮಯದಲ್ಲಿ ರೈತರಿಗೆ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ತೋಟಗಾರಿಕೆ ವಿಸ್ತರಣೆ ಮತ್ತು ತರಬೇತಿ ಕಾರ್ಯಕ್ರಮದಡಿ ಫಲಪುಷ್ಪ ಪ್ರದರ್ಶನ ಸಲುವಾಗಿ ನಿಗದಿಪಡಿಸಿದ ಅನುದಾನದನ್ವಯ ಪೂರ್ವಯೋಜನೆ ಸಿದ್ಧಪಡಿಸಿಕೊಳ್ಳಲು ಹಾಗೂ ಅದರಲ್ಲಿ ಜಿಲ್ಲೆಯಲ್ಲಿ ಬೆಳೆಯುವಂತಹ ಮುಖ್ಯ ಪುಷ್ಪಗಳನ್ನು ಹಾಗೂ ಹೂವಿನ ಕುಂಡಗಳನ್ನು ತಂದು ಸಸಿಗಳನ್ನು ಬೆಳೆಸಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಾದ ಭಾವಿದೊಡ್ಡಿ ರಾಹುಲಕುಮಾರ, ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಗುರುನಾಥ ಪಾಟೀಲ,ರಾಘವೇಂದ್ರ ಬಗಲಿ ಸೇರಿದಂತೆ ಕಚೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.