ತಮಿಳುನಾಡಿಗೆ ಅ.31ರವರೆಗೆ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಸೂಚನೆ
ಬೆಂಗಳೂರು: ತಮಿಳುನಾಡಿಗೆ ಅ.16ರಿಂದ 31ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಬುಧವಾರ ಸೂಚಿಸಿದೆ.
ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ದೆಹಲಿಯಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿದ್ದು, ಸಭೆಯಲ್ಲಿ ಕರ್ನಾಟಕ 2023ರ ಅ.16ರಿಂದ 31ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು. ಈ ಆದೇಶ ಅ.16ರ ಬೆಳಗ್ಗೆ 8:00 ಗಂಟೆಯಿಂದ ಅನ್ವಯವಾಗಲಿದ್ದು, ಅದನ್ನು 2023ರ ಅ.31ರವರೆಗೂ ಕಾಯ್ದುಕೊಳ್ಳಬೇಕು ಎಂದು ಕಾವೇರಿ ಜಲನಿಯಂತ್ರಣ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ನೀರಿನ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಳಿಗುಂಡ್ಲು ಜಲಾಶಯಕ್ಕೆ ನೀರು ಬಿಡುಗಡೆಗೊಳಿಸುವುದು ಅಸಾಧ್ಯವೆಂದು ಕರ್ನಾಟಕವು ಸಿಡಬ್ಲ್ಯುಆರ್ಸಿ ಮುಂದೆ ವಾದ ಮಂಡಿಸಿತ್ತು.
ತಮಿಳುನಾಡಿಗೆ ನೀರು ಬಿಡುವ ಕುರಿತಾದ ಸುಪ್ರೀಂಕೋರ್ಟ್ ಹಾಗೂ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಕರ್ನಾಟಕ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರಪರಿಸ್ಥಿತಿ ಸೃಷ್ಟಿಯಾಗಿದ್ದು ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಅಸಾಧ್ಯವೆಂದು ಕರ್ನಾಟಕ ಸರಕಾರವು ವಾದಿಸಿತ್ತು.
ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ ಈಗ 66 ಟಿಎಂಸಿ ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 110 ಟಿಎಂಸಿ ಅಡಿಗಳಷ್ಟು ನೀರಿತ್ತು. ಈ ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ.51ರಷ್ಟಿದೆ. ರಾಜ್ಯದಲ್ಲಿ ಮುಂಗಾರು ಕೊನೆಗೊಂಡಿದ್ದು, ಹಿಂಗಾರು ಕೂಡ ತೃಪ್ತಿಕರವಾಗಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗಿದ್ದರೂ ಜಲಾಶಯಗಳಿಗೆ ಒಳಹರಿವಿನಲ್ಲಿ ಹೆಚ್ಚಳ ಆಗಿಲ್ಲ. ಹೀಗಾಗಿ ತಮಿಳುನಾಡಿಗೆ ಸಧ್ಯ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಪ್ರತಿಪಾದಿಸಿದ್ದರು.