ಮಾಜಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ | ಆಮ್ ಆದ್ಮಿಯಿಂದ ಸ್ಪರ್ಧಿಸಿದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಕಾಂಗ್ರೆಸ್ಸಿನತ್ತ ಮುಖ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ
ಬೆಂಗಳೂರು: ಕಾಂಗ್ರೆಸ್ ನಾಯಕರಾದ ಎಂಎಲ್ಸಿ ಜಗದೀಶ್ ಶೆಟ್ಟರ್ ಮತ್ತು ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದಾದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯನ್ನೇ ತಂದು ಚರ್ಚೆ ಮಾಡಿದ್ದಾರೆ. ವಿವಿಧ ಪಕ್ಷಗಳ 42 ಕ್ಕೂ ಹೆಚ್ಚು ಮುಖಂಡರ ಅರ್ಜಿಗಳು ನನ್ನ ಮುಂದಿದೆ. ಆ ಹೆಸರುಗಳನ್ನು ಈಗ ಬಹಿರಂಗ ಮಾಡುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನು
ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಅವರು ಮಾತನಾಡಿದರು.
“ಸ್ಥಳೀಯ ನಾಯಕರುಗಳ ಜತೆ ಚರ್ಚೆ ಮಾಡಿ, ಒಮ್ಮತ ಮೂಡಿಸಿ ಅನ್ಯ ಪಕ್ಷಗಳ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ವಿರೋಧ ಪಕ್ಷಗಳ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ನಮ್ಮ ಪಕ್ಷ ಹಾಗೂ ಕಾರ್ಯಕರ್ತರಿಗೆ ಶಕ್ತಿ ತುಂಬಿದಂತಾಗಿದೆ. ಕೆಲವರು 2024 ರಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತದೆ ಎಂದು ಹೇಳುತ್ತಿದ್ದಾರೆ. ಅದರ ವಿವರಣೆಗೆ ನಾನು ಹೋಗುವುದಿಲ್ಲ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ 100ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ನನ್ನನ್ನು ಭೇಟಿ ಮಾಡಿ, ನಾವು ʼಇಂಡಿಯಾʼದಲ್ಲಿ ಗುರುತಿಸಿಕೊಂಡಿದ್ದು, ನಿಮ್ಮ ಜೊತೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆಂದು ಡಿ.ಕೆ.ಶಿವಕುಮಾರ ಹೇಳಿದರು.
ಅಲ್ಲದೆ ಬೀದರ್ ನಿಂದ ಚಾಮರಾಜನಗರದ ತನಕ ಕಾಂಗ್ರೆಸ್ ಪಕ್ಷ ಸೇರಲು ಉತ್ಸುಕರಾಗಿದ್ದಾರೆ. ಬಿಜೆಪಿ ತಂಡವೊಂದು ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರನ್ನು ಭೇಟಿ ಮಾಡುತ್ತಿದೆ. ಈ ಭೇಟಿಯ ಬಗ್ಗೆ ನಮ್ಮ ಪಕ್ಷದ ಮುಖಂಡರು, ಶಾಸಕರು ಇಂಚಿಂಚೂ ಮಾಹಿತಿ ನೀಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರು ಎಷ್ಟೇ ಚರ್ಚೆಗೆ ಎಳೆದರೂ ನಾನು ಏನನ್ನೂ ಬಿಟ್ಟುಕೊಡುವುದಿಲ್ಲ” ಎಂದು ಡಿಕೆಶಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್. ಚಂದ್ರಪ್ಪ, ಸಚಿವರಾದ ಹೆಚ್ ಕೆ ಪಾಟೀಲ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವರಾದ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿಜೆಪಿಯ ಇನ್ನೂ ಅನೇಕ ನಾಯಕರಿಗೆ ಗಾಳ

ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ರಾಮಪ್ಪ ಲಮಾಣಿ, ‘ಯಾವುದೇ ಷರತ್ತು ಇಲ್ಲದೇ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಬಿಜೆಪಿಯಲ್ಲಿ ಆಗಿರುವ ನೋವಿನಿಂದ ಆ ಪಕ್ಷ ತೊರೆದಿದ್ದೇನೆ. ಕಾಂಗ್ರೆಸ್ ಪಕ್ಷದ ನಾಯಕರು ಯಾರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಾರೋ ಅವರನ್ನು ಗೆಲ್ಲಿಸಲು ನಾನು ಶ್ರಮಿಸುತ್ತೇನೆ’ ಎಂದರು.
‘ಜಗದೀಶ ಶೆಟ್ಟರ್ ಹಾಗೂ ಡಿ.ಕೆ. ಶಿವಕುಮಾರ್ ಅವರು ಉತ್ತರ ಕರ್ನಾಟಕ ಭಾಗದ ಅನೇಕ ನಾಯಕರಿಗೆ ಗಾಳ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಶಾಸಕರು ಕೇವಲ 1,500ಕ್ಕಿಂತ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲದಿದ್ದರೆ, ಬಿಜೆಪಿ 40 ಸ್ಥಾನಗಳಿಗೆ ನಿಲ್ಲುತ್ತಿತ್ತು. ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಷ್ಟು ದೂಳೀಪಟ ಆಗಲಿದೆ’ ಎಂದರು.
‘ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಜನರಿಗೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಜನರು ಕೂಡ ಕಾಂಗ್ರೆಸ್ ಸರ್ಕಾರದ ಮೇಲೆ ಹೆಚ್ಚಿನ ವಿಶ್ವಾಸ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರೂ ಕೂಡ ಪಕ್ಷ ತೊರೆದು ಕಾಂಗ್ರೆಸ್ ಸೇರುವುದಾಗಿ ಮಾತು ನೀಡಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಕಾರ್ಯಕ್ರಮ ಮಾಡುತ್ತೇವೆ’ ಎಂದರು.

