ಹೂವಿನಹಿಪ್ಪರಗಿ ಶಾಖಾ ಕಾಲುವೆ ಕೊನೆವರೆಗೆ ನೀರು ಹರಿಸಲು ಆಗ್ರಹ
ಆಲಮಟ್ಟಿ: ಜನ, ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸಲು ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ಕೊನೆ ಅಂಚಿನವರೆಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಹೂವಿನಹಿಪ್ಪರಗಿ ಶಾಖಾ ಕಾಲುವೆಯ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹಲವು ರೈತರು ಗುರುವಾರ, ಇಲ್ಲಿಯ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿದರು.
ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಈ ಶಾಖಾ ಕಾಲುವೆ ನಿರ್ಮಿಸಿ ಹಲವು ವರ್ಷಗಳಾಗಿವೆ. ಆದರೆ ಇದರ ಪ್ರಯೋಜನ ಕೆಲವೇ ಹಳ್ಳಿಗಳಿಗೆ ಮಾತ್ರ ಆಗಿದೆ. ಪ್ರಸ್ತುತ ಮಳೆಯ ಕೊರತೆಯ ಕಾರಣ, ಅಂತರ್ಜಲ ಮಟ್ಟವೂ ಕುಸಿದಿದೆ. ಈ ಅಚ್ಚುಕಟ್ಟು ಭಾಗದ ರೈತರ ಪರಿಸ್ಥಿತಿಯಂತೂ ಭೀಕರವಾಗಿದೆ. ಒಣ ಕಾಲುವೆಯಲ್ಲಿ ನೀರು ಬರಬಹುದು ಎಂಬ ಆಶಾ ಭಾವನೆಯೂ ಕಮರಿಹೋಗಿದೆ ಎಂದು ಅವರು ದೂರಿದರು.
*ಕೇವಲ ೩೫ ಕಿ.ಮೀ ವರೆಗೆ ಮಾತ್ರ ನೀರು:*
ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ೬೩ ಕಿ.ಮೀ ಉದ್ದವಿದ್ದರೂ ಮೊದಲ ೩೫ ಕಿ.ಮೀವರೆಗೆ ಮಾತ್ರ ನೀರು ಬರುತ್ತದೆ. ಅಲ್ಲಿ ಸಂಪೂರ್ಣ ನೀರು ಹರಿದು ಆ ಭಾಗದ ರೈತರಿಗೆ ಅನುಕೂಲವಾಗಿದೆ. ಮುಂದೆ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರೂ ರೈತರೇ ನೀರು ಬಿಡುತ್ತಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಸದ್ಯ ಆವರಿಸಿರುವ ಬರದ ಕಾರಣ, ಮಾನವೀಯ ದೃಷ್ಠಿಯಿಂದ ಈ ಯೋಜನೆಯ ಕಾಲುವೆಯ ಕೊನೆ ಅಂಚಿನವರೆಗೂ ಪ್ರತಿ ೧೫ ದಿನಕ್ಕೆ ಒಮ್ಮೆಯಾದರೂ ನೀರು ಹರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಮುಖ್ಯ ಎಂಜಿನಿಯರ್ ಎಚ್.ಎನ್. ಶ್ರೀನಿವಾಸ ಮನವಿ ಸ್ವೀಕರಿಸಿ ಸ್ಪಂದಿಸುವ ಭರವಸೆ ನೀಡಿದರು.
ರೈತರಾದ ಬಾಬು ಬಳವಾಟ, ಬಸವರಾಜ ಹಡಪದ, ತಿಪ್ಪಣ್ಣ ಹಿಪ್ಪರಗಿ, ಗ್ಯಾನಪ್ಪ ಹಡಪದ, ಚನ್ನಬಸಪ್ಪ ಯಾಳವಾರ, ಸಂಗಪ್ಪ ಹಾವರಗಿ, ಮಾಳಪ್ಪ ಮುದೂರ, ಸಂಗಪ್ಪ ಬಾಗೇವಾಡಿ, ಅಶೋಕ ಬಿದ್ನಾಳ, ಮಂಜುನಾಥ ಹಡಪದ, ಗೋಲಪ್ಪ ಹಡಪದ, ಬಸು ಗುಡದಿನ್ನಿ, ಸುರೇಶ ಕೊಣ್ಣೂರ ತಿರುಪತಿ ಬಂಡವಡ್ಡರ ಸೇರಿದಂತೆ ಬಸರಕೋಡ, ಜಟ್ಟಗಿ, ಕುಂಟೋಜಿ ಗ್ರಾಮದ ರೈತರು ಉಪಸ್ಥಿತರಿದ್ದರು.