ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಈಗಾಗಲೇ ಸಿಂದಗಿ ನಗರದಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ೨ಸಿಟಿ ಬಸ್‌ಗಳ ಸಂಚಾರ ನಡೆಯುತ್ತಿವೆ, ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಇನ್ನು ೨ಹೊಸ ಸಿಟಿ ಬಸ್‌ಗಳಿಗೆ ಚಾಲನೆ ನೀಡಲಾಗಿದೆ ಒಟ್ಟು ಸಿಂದಗಿ ನಗರದಲ್ಲಿ ೪ಬಸ್‌ಗಳು ಸಂಚಾರ ಪ್ರಾರಂಭವಾಗಿವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿಯ ಶ್ರೀ ಚೆನ್ನವೀರ ಸ್ವಾಮೀಜಿ ಬಸ್ ನಿಲ್ದಾಣದಲ್ಲಿ ನೂತನ ೨ ಸಿಟಿ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದ ಅವರು, ಅನೇಕ ಕಾರ್ಯಕ್ರಮಗಳಿಗೆ ವಿವಿಧ ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಿಂದ ಶಾಲಾ ಕಾಲೇಜಿಗೆ ತೆರಳಲು ಸಿಟಿ ಬಸ್‌ಗಳನ್ನು ಮಾಡಿ ಎಂದು ಒತ್ತಾಯ ಮಾಡಿದ್ದರು. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಮತ್ತೇ ೨ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. ಈ ಬಸ್‌ಗಳು ಸಿಂದಗಿ ತಾಲೂಕಿನ ಯರಗಲ್, ರಾಂಪೂರ, ಬೆನಕೊಟಗಿ, ಚಿಕ್ಕಸಿಂದಗಿ, ಮನ್ನಾಪೂರ, ಬಂದಾಳ, ಅಂತರಗಂಗಿ ಸೇರಿದಂತೆ ೮-೧೦ಕಿಮೀ ಒಳಗಡೆ ಬರುವ ಗ್ರಾಮಗಳಿಗೆ ಈ ಬಸ್ಸಿನ ಸೌಲಭ್ಯ ಒದಗಿಸಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸಾರಿಗೆ ಇಲಾಖೆಯ ಅಧಿಕಾರಿ ವೇಳೆ ಮತ್ತು ವ್ಯವಸ್ಥೆ ಸರಿಯಾದ ನಿಟ್ಟಿನಲ್ಲಿ ಮಾಡಬೇಕು. ಒಳ್ಳೆಯ ಸೇವೆ ನೀಡಬೇಕು ಎಂದರು.
ಈ ವೇಳೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಸಿಂದಗಿ ನಗರಕ್ಕೆ ಇಂತಹ ಶಾಸಕರು ದೊರತದ್ದು ಜನತೆಯ ಪುಣ್ಯ. ಎಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ ಅಲ್ಲಿ ಆ ಪ್ರದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಸಿಂದಗಿ ಶಾಸಕರ ಜನಪರ ಕಾರ್ಯಗಳು ಹೀಗೆ ಸಾಗಲಿ ಎಂದು ಆಶೀರ್ವದಿಸಿದರು.
ಈ ವೇಳೆ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ವ್ಯವಸ್ಥಾಪಕ ಎಂ.ಆರ್.ಲಮಾಣಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕಾಧ್ಯಕ್ಷ ಅಶೋಕ ವಾರದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ಸುನಂದಾ ಯಂಪುರ, ಜಯಶ್ರೀ ಹದನೂರ, ರಜತ ತಾಂಬೆ, ಬಸಯ್ಯ ಮಠ, ಶಾಂತೂ ರಾಣಾಗೋಳ ಸೇರಿದಂತೆ ಅನೇಕರಿದ್ದರು.

