ಓತಿಹಾಳ ಗ್ರಾಮದ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸದುಪಯೋಗ ಪಡಿಸಿಕೊಂಡು ಶಾಲಾ ಕಟ್ಟಡಗಳನ್ನು ನವೀಕರಿಸಿದ ಬಳಗಕ್ಕೆ ಅಭಿನಂದನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ಜಿಲ್ಲಾ ಪಂಚಾಯತ್, ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ, ಸಿಂದಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಪ್ರಗತಿ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡ ನೂತನ ಶಾಲಾ ಮತ್ತು ಗಣಕಯಂತ್ರ ತರಗತಿ ಕೊಠಡಿಗಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘಗಳು ಸ್ಥಾಪನೆಯಾದರೆ ಶಾಲೆ ಅಭಿವೃದ್ಧಿಯಾಗಲು ಸಾಧ್ಯ. ಓತಿಹಾಳ ಗ್ರಾಮದ ಯುವಕರು ಇಂತಹ ಪ್ರಗತಿ ಸಂಘವನ್ನು ಸ್ಥಾಪಿಸಿ ಸರಕಾರಿ ಶಾಲಾ ಅಭಿವೃದ್ಧಿಗೆ ನಿಂತಿರುವುದು ಸಂತಸ ತಂದಿದೆ. ಅವರ ಬೇಡಿಕೆಯಂತೆ ಶಾಲೆಗೆ ಕಂಪೌಂಡ ಬಹಳ ಅವಶ್ಯಕತೆ ಇದೆ. ಶಾಲಾ ಕಂಪೌಂಡಗೆ ಅತೀ ಶೀಘ್ರದಲ್ಲೇ ರೂ.೧೦ಲಕ್ಷ ಅನುದಾನ ಬಿಡುಗಡೆ ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರಕಾರಿ ಶಾಲೆಗಳು ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯಾಗಬೇಕು ಏಕೆಂದರೆ ಸಂಸ್ಕಾರ ಸಿಗುವುದು ಕೇವಲ ಸರಕಾರಿ ಶಾಲೆಯಲ್ಲಿ ಮಾತ್ರ. ಈ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾರ್ಯಗತವಾಗುತ್ತೇನೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಹಾಗೂ ಕನ್ನೋಳ್ಳಿ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯರು ತಲಾ ರೂ.೫ ಸಾವಿರ ಶಾಲೆಯ ಜೀರ್ಣೊದ್ಧಾರಕ್ಕೆ ನೀಡಿದರು.
ಈ ವೇಳೆ ಜಮಖಂಡಿಯ ಓಂಕಾರ ಆಶ್ರಮದ ಮಾತೋಶ್ರೀ ಶ್ರೀದೇವಿ ಮಾತಾಜಿ, ಹೇಮರೆಡ್ಡಿ ಮಲ್ಲಮ್ಮ ಶ್ರೀಮಠದ ಮಾತೋಶ್ರೀ ಬಸಮ್ಮ ತಾಯಿ, ಸುನೀಲಕುಮಾರ ಮನೂರ, ಡಿ.ಬಿ.ದೊಡಮನಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಹೆಚ್.ಬಿರಾದಾರ, ಬಸವರಾಜ ಅಗಸರ, ಪುಂಡಲೀಕ ಬಿರಾದಾರ, ಚಂದ್ರಶೇಖರ ದೇವರೆಡ್ಡಿ, ಶಿವಾನಂದ ಸಾಲಿಮಠ, ಬಸಯ್ಯ ಮಠ, ಸೋಮಣ್ಣ ನಾಕೇತ್ತಿನ, ಜಿ.ಎಂ.ನಡಕುರ, ಎಂ.ಎ.ಖತೀಬ ಸೇರದಂತೆ ಗ್ರಾಮಸ್ಥರು ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೈರುಹಾಜರಿ
ತಾಲೂಕಿನ ಓತಿಹಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಇಂತಹ ಒಂದೊಳ್ಳೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗೈರು ಹಾಜರಿ ಎದ್ದು ಕಾಣುತ್ತಿತ್ತು.

