ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ರಜತ ಮಹೋತ್ಸವ ಸಮಾರಂಭ ಇದೇ ದಿ:೨೮ ರಂದು ಭಾನುವಾರ (ನಾಳೆ) ಬೆಳಿಗ್ಗೆ ೧೨ ಗಂಟೆಗೆ ಇಂಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಅಧ್ಯಕ್ಷ ರಾಜೀವ ಗುತ್ತೇದಾರ ಹೇಳಿದರು.
ಪಟ್ಟಣದ ಸಂಘದ ಕಟ್ಟಡದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
೨೦೦೦ನೇ ಡಿಸೆಂಬರ್ ೨ರಂದು ಆರಂಭಗೊಂಡ ನಮ್ಮ ಸಹಕಾರಿ ಸಂಘ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ತನ್ನ ದಶಮಾನೋತ್ಸವ ಸಮಯದಲ್ಲಿ ಸ್ವಂತ ಕಟ್ಟಡ ಹೊಂದಿತು. ಈಗ ರಜತ ಮಹೋತ್ಸವ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಎರಡು ನೂತನ ಶಾಖೆಗಳನ್ನು ವಿಜಯಪುರ ನಗರ ಹಾಗೂ ಶಿವಣಗಿ ಗ್ರಾಮದಲ್ಲಿ ಆರಂಭಿಸಿ ಒಟ್ಟು ೩ ಶಾಖೆಗಳ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಾಳೆ ಜರುಗಲಿರುವ ಸಮಾರಂಭದಲ್ಲಿ ಸಚಿವರು, ಜಿಲ್ಲೆಯ ಆಹ್ವಾನಿತ ಗಣ್ಯರು, ನಿರ್ದೇಶಕರು, ಸರ್ವಸದಸ್ಯರು ಹಾಗೂ ಗ್ರಾಹಕರು ಆಗಮಿಸಲಿದ್ದಾರೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಮಹಾದೇವ ಹಿರೇಕುರುಬರ ಮಾತನಾಡಿ, ಸಂಘ ಕಳೆದ ೨೫ ವರ್ಷಗಳಲ್ಲಿ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡಮಾಡುವ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ಸತತ ೪ ಸಲ ಪ್ರಥಮ, ೩ ಸಲ ದ್ವಿತೀಯ ಮತ್ತು ೨ ಸಲ ತೃತೀಯ ಸ್ಥಾನ ಪಡೆದಿದೆ. ಆಲಮೇಲ ಪಟ್ಟಣದಲ್ಲಿ ಜರುಗಿದ ೭೨ನೇಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘ ಗೌರವಕ್ಕೆ ಪಾತ್ರವಾಗಿದೆ. ಜೊತೆಗೆ ಸಂಘದ ಮಾಜಿ ಅಧ್ಯಕ್ಷ ಡಾ.ಆರ್.ಆರ್.ನಾಯಿಕ್‌ರವರು ಸಹಕಾರರತ್ನ, ಉತ್ತಮ ಸಹಕಾರಿ ಪ್ರಶಸ್ತಿ ಪಡೆದಿದ್ದು ಸಂಘದ ಸಮಗ್ರ ಸೇವೆಗೆ ಸಂದ ಗೌರವವಾಗಿದೆ. ಸಂಘ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಚಟುವಟಿಕೆಗಳನ್ನು ಕೈಗೊಂಡಿದ್ದು, ಕೋವಿಡ್-೧೯ ರ ಸಂದರ್ಭದಲ್ಲಿ ಕೂಲಿ ಕಾರ್ಮಿಕರಿಗೆ, ಆಶಾ ಕಾರ್ಯಕತೆಯರಿಗೆ ನೆರವು ನೀಡಿ ಹತ್ತು ಹಲವು ಜನಪರ ಕಾರ್ಯಗಳ ಮೂಲಕ ತನ್ನ ಸೇವಾಕಾರ್ಯಗಳನ್ನು ವಿಸ್ತರಿಸಿದೆ. ಮುಂದೆ ಸಹ ಈ ಕಾರ್ಯಗಳನ್ನು ಮುಂದುವರೆಸಲಿದೆ ಎಂದರು.
ಸಂಘದ ಉಪಾಧ್ಯಕ್ಷ ಹಸನ್‌ಸಾಬ್ ವಡ್ಡೋಡಗಿ, ನಿರ್ದೇಶಕ ಸಿದ್ದು ಮಸಬಿನಾಳ, ಕೃಪಾ ವಿ.ಸ.ಸಂಘದ ಮಾಜಿಅಧ್ಯಕ್ಷ ಸೋಮನಗೌಡ ಪಾಟೀಲ(ಹರನಾಳ) ಇದ್ದರು.

