ಲಿಂಗಾಯತ–ಪಂಚಮಸಾಲಿ ಸಮಾಜಕ್ಕೆ ಗುತ್ತಿಗೆದಾರ ಪ್ರಭುಗೌಡ ಬಿರಾದಾರ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಮರ್ಯಾದೆ ಕೊಟ್ಟವರಿಗೆ ಬೆಂಬಲಿಸುವುದೇ ನಮ್ಮ ಧರ್ಮ ಎಂದು ಅಹಿರಸಂಗ ಗ್ರಾಮದ ಪ್ರಥಮ ದರ್ಜೆ ಗುತ್ತಿಗೆದಾರ ಪ್ರಭುಗೌಡ ಬಿರಾದಾರ ಹೇಳಿದ್ದಾರೆ.
ಬುಧವಾರ ಝಳಕಿಯ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ತಾಲೂಕಿನ ರಾಜಕೀಯ ಪರಿಸ್ಥಿತಿ ಕಳೆದ 12 ವರ್ಷಗಳಿಂದ ಸೂಕ್ಷ್ಮವಾಗಿ ಸಾಗುತ್ತಿದ್ದು, ಈ ರಾಜಕೀಯ ಪ್ರವಾಹದಲ್ಲಿ ಲಿಂಗಾಯತ ಸಮುದಾಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಇಂಡಿ ತಾಲೂಕಿನ ಲಿಂಗಾಯತ ಸಮುದಾಯದವರಿಗೆ, ವಿಶೇಷವಾಗಿ ಪಂಚಮಸಾಲಿ ಸಮುದಾಯದವರಿಗೆ ಮನವಿ ಮಾಡಿಕೊಂಡ ಅವರು, “ನಮಗೆ ಯಾರು ಗೌರವ ನೀಡುತ್ತಾರೆ, ಮರ್ಯಾದೆ ಕೊಟ್ಟವರಿಗೆ ಬೆಂಬಲವಾಗಿ ನಿಲ್ಲುವುದೇ ನಮ್ಮ ಧರ್ಮ” ಎಂದು ಹೇಳಿದರು.
ಸಮಾಜದ ಕೆಲವರ ತಪ್ಪುಗಳಿಂದ ಸಂಪೂರ್ಣ ಸಮುದಾಯ ಟೀಕೆಗೆ ಗುರಿಯಾಗುತ್ತಿರುವುದು ದುಃಖಕರ ವಿಷಯವಾಗಿದ್ದು, ಇದಕ್ಕೆ ಯಾರು ಕಾರಣ ಎಂಬ ಬಗ್ಗೆ ಆತ್ಮಪರಿಶೀಲನೆ ಅಗತ್ಯವಿದೆ ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲರು ಕಳೆದ 12 ವರ್ಷಗಳಿಂದ ಲಿಂಗಾಯತ ಸಮಾಜಕ್ಕೆ ಅಪಾರ ಗೌರವ ನೀಡುತ್ತಾ ಬಂದಿದ್ದಾರೆ. ಅವರು ಸಮಾಜದ ಮೇಲೆ ತೋರಿದ ನಂಬಿಕೆ, ಗೌರವವನ್ನು ನಾವು ಕಾಪಾಡಿಕೊಂಡು ಹೋಗಬೇಕು. ಆದರೆ ಕೆಲ ಸಂದರ್ಭಗಳಲ್ಲಿ ಸಮಾಜ ಅವರ ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಂಡಿಲ್ಲ ಎಂಬ ಭಾವನೆ ನನಗಿದೆ ಎಂದು ಪ್ರಭುಗೌಡ ಬಿರಾದಾರ ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಅನೇಕ ಬದಲಾವಣೆಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಪತ್ರಿಕಾ ಮಾಧ್ಯಮಗಳ ಮೂಲಕ ಸಮಾಜದ ಎಲ್ಲ ಮುಖಂಡರಿಗೆ ಕಳಕಳಿಯ ಮನವಿ ಮಾಡುತ್ತೇನೆ. “ಇನ್ನೂ ಕಾಲ ಮಿಂಚಿಲ್ಲ. ಲಿಂಗಾಯತ ಸಮಾಜದ ಎಲ್ಲ ನಾಯಕರು ಒಂದಾಗಿ ಶಾಸಕರ ಕೈ ಬಲಪಡಿಸೋಣ” ಎಂದು ಅವರು ಕರೆ ನೀಡಿದರು.
ಶಾಸಕರನ್ನು ಒಳಗೊಂಡು ನಾವು ಎಲ್ಲರೂ ಲಿಂಗಾಯತರೆ ಎಂಬುದನ್ನು ಯಾರೂ ಮರೆಯಬಾರದು ಎಂದು ಹೇಳಿದ ಅವರು, ಸಮಾಜದ ಏಕತೆ, ಗೌರವ ಮತ್ತು ಭವಿಷ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದರು.

