ಕೆಂಭಾವಿ ತಾಲೂಕಿನಲ್ಲಿ ಶೀತಗಾಳಿ-ಚಳಿಗೆ ಸುಸ್ತಾದ ಜನಜೀವನ | ರಕ್ತ ಸಂಚಾರಕ್ಕೆ ಸಂಚಕಾರ | ವೃದ್ಧರು, ಮಕ್ಕಳಲ್ಲಿ ನಡುಕ
ಉದಯರಶ್ಮಿ ದಿನಪತ್ರಿಕೆ
ವಿಶೇಷ ವರದಿ: ಡಾ.ಯಂಕನಗೌಡ ಪಾಟೀಲ
ಕೆಂಭಾವಿ: ಚಳಿಗಾಲ ಎಂದರೆ ವರ್ಷದ ನಾಲ್ಕು ತಿಂಗಳು ಅತ್ಯಂತ ತಂಪಾದ ಋತು, ಇದು ಶರತ್ಕಾಲ ಮತ್ತು ವಸಂತ ಕಾಲದ ನಡುವೆ ಬರುತ್ತದೆ, ಭೂಮಿಯ ಅಕ್ಷದ ಓರೆಗೊಂಡು ಸೂರ್ಯನಿಂದ ದೂರವಿರುವಾಗ ಸಂಭವಿಸುತ್ತದೆ, ಈ ಸಮಯದಲ್ಲಿ ಹಗಲು ಕಡಿಮೆಯಾಗಿ ರಾತ್ರಿಗಳು ದೀರ್ಘವಾಗಿ ಇರುವುದು, ನಿಸರ್ಗದ ಬದಲಾವಣೆಯ ಜೊತೆಗೆ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಋತುವಾಗಿರುವುದು ನಿಜ. ಆದರೆ ಈ ಬಾರಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ, ಶೀತಗಾಳಿ, ಮಾಗಿ ಚಳಿಯ ಥಂಡಿಗೆ ಥಂಡಾ ಹೊಡೆದ ಜನಜೀವನ.
ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ವಲಯದಲ್ಲಿ ವಿಪರೀತ ಚಳಿಯೋ.. ಚಳಿ.. ದಿನ ಬೆಳಗಿನ ಜಾವ ಹಾಗೂ ಸಾಯಂಕಾಲ ಸಮಯ ಮೈನಡುಗಿಸುವ ಚಳಿ ಹೇಳ ತೀರದು. ತೀವ್ರವಾಗಿ ಬೀಸುವ ಶೀತ ಗಾಳಿಗೆ ಜನರು ನಲುಗಿ ಹೋಗಿದ್ದಾರೆ. ಸೂರ್ಯೋದಯಲ್ಲಿರುವ ಶೀತ ಗಾಳಿ, ಬಿಸಿಲು ಹೆಚ್ಚಾದಂತೆಲ್ಲಾ, ಶೀತಗಾಳಿಯ ಚಳಿ ಹೆಚ್ಚಾಗುತ್ತಿದ್ದು. ಜನತೆಯನ್ನು ಆತಂಕಕ್ಕೆ ದೂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಶೀತ ಗಾಳಿಗೆ, ಮಹಿಳೆಯರು, ಮಕ್ಕಳು, ಯುವಕರು ಮತ್ತು ವಯಸ್ಸಾದವರಲ್ಲಿ ಜ್ವರ, ಕೆಮ್ಮು, ನೆಗಡಿ, ಮೈ, ಕೈ, ನೋವು, ಮತ್ತು ಚರ್ಮದಲ್ಲಿ ತುರಿಕೆ ಹೆಚ್ಚಾಗಿ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಪಾರ್ಕಿಂಗನಲ್ಲಿ ವಾಕಿಂಗ್ ಮಾಡುತ್ತಿದ್ದ ಹಿರಿಯ ನಾಗರಿಕರು, ಕೊರೆಯುವ ಶೀತ ಗಾಳಿಗೆ (ಚಳಿಗೆ) ಕಂಗಾಲಾಗಿ, ಬೆಚ್ಚಗಿನ ಬಟ್ಟೆ ಧರಿಸಿ, ಬೆಂಕಿಯ ಮೊರೆ ಹೋಗಿ ಮನೆಯ ಮೂಲೆ ಹಿಡಿದಿದ್ದಾರೆ. ನಸುಕಿನ ಜಾವ ಕೆಲಸಕ್ಕೆ ತೆರಳುವ, ಕೃಷಿ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳ ಬದುಕಿನೊಂದಿಗೆ ಚೆಲ್ಲಾಟವಾಡುವ ಚಳಿಗಾಳಿಗೆ ಹಿಡಿ ಶಾಪ ಹಾಕುತ್ತಿರುವ ಜನತೆ, ಅತಿಯಾದ ಶೀತಗಾಳಿ, ಚಳಿಯ ಕಂಡು ಶಾಲಾ, ಕಾಲೇಜುಗಳ ಸಮಯ ಬದಲಾವಣೆಯಾದರೂ, ಮೈಕೊರೆಯುವ ಚಳಿ ಇಡೀ ಮಾನವ ದೇಹವನ್ನೇ ಗಡಗಡ ನಡುಗಿಸುವ ಚಳಿಗಾಲ ರಕ್ತ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ ಎನ್ನುತ್ತಾರೆ ಜನಸಾಮಾನ್ಯರು.
ಶೀತಗಾಳಿಯಿಂದ ಸುಧಾರಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ. ಮೈನಡುಗಿಸುವ ಚಳಿಗೆ. ಕೊರೆಯುವ ಶೀತ ಗಾಳಿಯಿಂದ ಕಾಪಾಡಿಕೊಳ್ಳಲು ದೇಹಕ್ಕೆ ಹೆಚ್ಚು ಬೆಚ್ಚನೆಯ ಆಹಾರ (ಶುಂಠಿ, ಚಕ್ಕೆ, ಲವಂಗ), ವ್ಯಾಯಾಮ (ಧ್ಯಾನ, ಯೋಗ) ಮತ್ತು ಬೆಚ್ಚಗಿನ ಬಟ್ಟೆಗಳ ಅಗತ್ಯವಿರುತ್ತದೆ, ಆದರೆ ಸೌತೆಕಾಯಿ, ಎಳನೀರು ಮತ್ತು ಮೊಸರಿನಂತಹ ತಂಪಾಗಿಸುವ ಆಹಾರಗಳನ್ನು ಮಿತಗೊಳಿಸಿ, ದಪ್ಪನೆಯ ಮತ್ತು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಆದಷ್ಟು ಮನೆಯಲ್ಲಿಯೇ ಇರಲು ಪ್ರಯತ್ನಿಸಿ. ಮನೆಯ ಒಳಗೂ ಬೆಚ್ಚಗಿನ ವಾತಾವರಣ ಇರಲಿ ಎನ್ನುತ್ತಾರೆ ವೈದ್ಯರು.

