ವಿಜಯಪುರ ಸಂಸದ ರಮೇಶ ಜಿಗಜಿಣಗಿ ಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಿಗೆ ಮನವಿ ಸಲ್ಲಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಎರಡು ಮಾರ್ಗದಲ್ಲಿ ಸಂಚರಿಸಲು ಆದೇಶಿಸುವಂತೆ ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು. ಇದಕ್ಕೆ ಕೇಂದ್ರ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಈ ರೈಲು ಸಂಚಾರ ಆರಂಭಗೊಳ್ಳಲಿದ್ದು, ಪ್ರಯಾಣಿಕರಿಗೆ ಸಮಯ ಉಳಿತಾಯವಾಗಿ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನೇಕ ವರ್ಷಗಳಿಂದ ಈ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಂಡು ಪತ್ರ ಬರೆಯಲಾಗಿತ್ತು, ಈಗ ಈ ಮಹತ್ವದ ಬೇಡಿಕೆಗೆ ಕೇಂದ್ರ ಸಚಿವರು ಸ್ಪಂದಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ, ಪ್ರಮುಖವಾಗಿ ಗೋಲಗುಂಬ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈ-ಪಾಸ್ ಮತ್ತು ಗದಗ ಬೈ-ಪಾಸ್‌ನಲ್ಲಿ ಹೀಗೆ ಎರಡೂ ಬೈ-ಪಾಸ್ ಮಾರ್ಗಗಳಲ್ಲಿ ನಡೆಸಲು ವಿನಂತಿಸಲಾಗಿತ್ತು. ಇದರಿಂದಾಗಿ ಪ್ರಯಾಣ ಅವಧಿ ತಗ್ಗಲಿದ್ದು, ಜನರ ಮಹತ್ವದ ಸಮಯ ಉಳಿತಾಯವಾಗಲಿದೆ. ದಸರಾ ಮತ್ತು ದೀಪಾವಳಿ ಹಬ್ಬಗಳಿಗೆ ಬೆಂಗಳೂರಿನಿಂದ ವಿಜಯಪುರಕ್ಕೆ ಆಗಮಿಸಿದ ಹೆಚ್ಚಿನ ಜನರು ಬೆಂಗಳೂರಿಗೆ ಮರಳಲು ಬಯಸುತ್ತಾರೆ. ವಿಜಯಪುರದ ಜನರು ಹಬ್ಬದ ಕಾರ್ಯಕ್ರಮಗಳನ್ನು ಆಚರಿಸಲು ಮತ್ತು ಬದ್ಧರಾಗಲು ನೀವು ತಕ್ಷಣ ವ್ಯವಸ್ಥೆ ಮಾಡಿದರೆ ಅದು ತುಂಬಾ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಾಗಲಕೋಟೆ ಸಂಸದರಾದ ಪಿ.ಸಿ. ಗದ್ದಿಗೌಡರ, ಮಾಜಿ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಅನೇಕ ಸಂಸದ ಮಿತ್ರರು ಈ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಜಿಗಜಿಣಗಿ ಹೇಳಿದ್ದಾರೆ.

