ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರದ ಶೇಗುಣಸಿಯಲ್ಲಿರುವ ಶಿವಶರಣ ಹರಳಯ್ಯನವರ ಗುಂಡದಲ್ಲಿ ಶಿವಶರಣ ಹರಳಯ್ಯನವರ ಕಲ್ಯಾಣಮ್ಮನವರ ಮೂರ್ತಿ ಅನಾವರಣ ಸಮಾರಂಭ ಇದೇ ದಿನಾಂಕ ೨೭ ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಶ್ರೀ ಶಿವಶರಣ ಹರಳಯ್ಯನವರ ಗುಂಡ ಅಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರೆಪ್ಪ ಅರ್ಧಾವೂರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರಾಗಿರುವ ಹರಳಯ್ಯನವರು ಶ್ರೇಷ್ಠ ಚೇತನ, ಅವರ ಸ್ಮರಣೆಯ ಯಾವೊಂದು ವಸ್ತುವು ಹರಳಯ್ಯನಗುಂಡದಲ್ಲಿ ಇರಲಿಲ್ಲ, ಹೀಗಾಗಿ ಅಲ್ಲಿ ಅವರ ಮೂರ್ತಿ ಸ್ಥಾಪನೆಯಾಗಬೇಕು ಎಂಬ ಸಮಾಜ ಬಾಂಧವರ ಆಶಯದಂತೆ ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.
ಬಬಲೇಶ್ವರ ಬೃಹನ್ಮಠದ ಶ್ರೀ ಡಾ.ಮಹಾದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಮಠಾಧೀಶರು ಭಾಗವಹಿಸಲಿದ್ದು, ಸಚಿವ ಡಾ.ಎಂ.ಬಿ. ಪಾಟೀಲ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ವಿಜಯಪುರ ನಗರ ಶಾಸಕ ಬಸನಗವಡ ಪಾಟೀಲ ಯತ್ನಾಳ ದಾನಿಗಳ ಫಲಕವನ್ನು ಅನಾವರಣಗೊಳಿಸಲಿದ್ದಾರೆ.
ಸಂಘದ ಗೌರವಾಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಬಾಗಲಕೋಟೆ, ಹಾವೇರಿ, ದಾವಣಗೆರೆ, ಕೊಪ್ಪಳ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವಾರು ಭಾಗಗಳಿಂದ ಸಮಾಜದ ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ, ಶರಣ ಹರಳಯ್ಯನವರ ಚಿಂತನೆಗಳನ್ನು ಪ್ರಸಾರ ಮಾಡುವ ಕಾರ್ಯಕ್ಕೂ ನಾವು ಆದ್ಯತೆ ನೀಡುತ್ತೇವೆ, ವಚನಗಳ ಪ್ರಸಾರ ಕಾರ್ಯ ನಡೆಯುತ್ತಿದೆ, ಈ ಕಾರ್ಯಕ್ಕೆ ನಮ್ಮ ಸಂಘ ಸಹ ಕೈ ಜೋಡಿಸಲಿದೆ ಎಂದು ವಿವರಿಸಿದರು.
ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಾಪುಗೌಡ ಪಾಟೀಲ ಶೇಗುಣಸಿ, ಪ್ರಮುಖರಾದ ವಸಂತ ಹೊನಮೋಡೆ, ಶ್ರೀನಿವಾಸ ಶಹಾಪೂರ, ಸಿದ್ಧರಾಮ ಹೊನ್ನಮೋರೆ, ಎಂ.ಆರ್. ಕಬಾಡೆ, ಎಂ.ಆರ್. ಸೌದಾಗರ, ಪರಶುರಾಮ ಹೊಸಮನಿ, ವಸಂತ ಮನಗೂಳಿ, ನಿರಂಜನ ಸಾಹೇಬಣ್ಣ, ಶಂಕರ ಜಮಖಂಡಿ, ಹಣಮಂತ ಸೂರ್ಯವಂಶಿ, ಮಂಜು ಕಬಾಡೆ, ರಾಘವೇಂದ್ರ ಹೊನ್ನಮೋರೆ, ಧರೆಪ್ಪ ಹೊಸಮನಿ, ನೇತಾಜಿ ಹೊನಕಟ್ಟಿ, ಸಾಯಬಣ್ಣ ನಿರಂಜನ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

