ಸಂಗಮನಾಥ ಸಕ್ಕರೆ ಕಾರ್ಖಾನೆ ತೂಕದಲ್ಲಿ ೫೬೦ ಕೆ.ಜಿ ಮೋಸ | ಅಧಿಕಾರಿಗಳಿಂದ ತಪಾಸಣೆ | ಮೋಸ ಸಾಬೀತು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಂದಗಿ ತಾಲೂಕಿನ ಮನ್ನಾಪುರದ ಸಂಗಮನಾಥ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಒಬ್ಬ ರೈತ ಸಂಶಯದಿಂದ ಹೊರಗಡೆ ತೂಕ ಮಾಡಿಕೊಂಡು ಬಂದಾಗ ಕಬ್ಬಿನ ತೂಕದಲ್ಲಿ ೧೦೦೦ ಕೆ,ಜಿ ಮೋಸ ಆಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಾರ್ಖಾನೆ ಸಿಬ್ಬಂದಿಯವರಿಗೂ ಹಾಗೂ ರೈತರ ನಡುವೆ ವಾಗ್ವಾದ ಉಂಟಾಯಿತು.
ಈ ವೇಳೆ ಸ್ಥಳಕ್ಕೆ ಸಿಂದಗಿ ತಹಶಿಲ್ದಾರರು ಹಾಗೂ ಅಳತೆ ಮತ್ತು ತೂಕದ ಅಧಿಕಾರಿಗಳು ಬಂದಾಗ ಸರಿಯಾದ ತೂಕ ತೊರಿಸಿ ರೈತರಿಗೆ ಮೊಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ, ಅಧಿಕಾರಿಗಳು ಕೂಡಾ ಬಂದಾಗ ೫೬೦ ಕೆ.ಜಿ ವ್ಯಾತ್ಯಾಸ ಬಂದಿದೆ ಇದನ್ನು ತಪಾಸಣೆ ಮಾಡಬೇಕು ಎಂದರು.
ಈ ವಿಷಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಿಂದ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಗುರುವಾರ ಇಂಡಿ ಉಪವಿಭಾಗಾಧಿಕಾರಿಗಳು, ಸಿಂದಗಿ ತಹಶಿಲ್ದಾರರು, ಆಹಾರ ಇಲಾಖೆ ನಿರ್ದೇಶಕರು ಹಾಗೂ ಅಳತೆ ಮತ್ತು ಮಾಪನ ಇಲಾಖೆಯ ಅಧಿಕಾರಿ, ಸಿಂದಗಿ ಪಿ.ಎಸ್.ಐ ಗಳೊಂದಿಗೆ ಸ್ಥಳಕ್ಕೆ ಹೋಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿ ವರದಿ ಕೊಡುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ನಿರ್ದೇಶನ ನೀಡಿದ್ದರು.
ಗುರುವಾರ ಬೆಳಿಗ್ಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಪೋನ ಮೂಲಕ ತಿಳಿಸದೇ ಕಾರ್ಖಾನೆಗೆ ಬೇಟಿ ನೀಡಿ, ಈ ಮೇಲಿನ ವಿಷಯಗಳನ್ನು ಹಂತ ಹಂತವಾಗಿ ಕೂಲಂಕುಷವಾಗಿ ಪರಿಶೀಲನೆ ಮಾಡಿದರು.
ಕಬ್ಬು ಕಾರ್ಖಾನೆಗೆ ಬಂದ ನಂತರ ಒಟ್ಟು ೩ ಬಾರಿ ತೂಕ ಮಾಡಿದಾಗ ೩ ಬಾರಿ ಬೇರೆ ಬೇರ ತೂಕ ತೋರಿಸಲಾಗಿತ್ತು, ಹೊರಗಡೆಗಿಂತ ೯೯೫ ಕೆ.ಜಿ ಕಡಿಮೆ ತೋರಿಸಿತ್ತು, ನಂತರದಲ್ಲಿ ೫೬೦ ಕೆ.ಜಿ ಕಡಿಮೆ ತೊರಿಸಿತ್ತು, ಅಧಿಕಾರಿಗಳು ಬಂದ ನಂತರ ಎಲ್ಲವೂ ಸರಿಯಾಗಿ ತೋರಿಸಲಾಗಿತ್ತು, ಎಲ್ಲದಕ್ಕೂ ಸಿ,ಸಿ.ಟಿ.ವಿ ಕಣ್ಗಾವಲು ಹಾಗೂ ಅಧಿಕೃತ ಕಾರ್ಖಾನೆಯವರು ನೀಡಿರುವ ರಸೀಧಿಯ ಮೇಲೆ ೫೬೦ ಕೆ.ಜಿ ಮೋಸ ಆಗಿರುವುದಾಗಿ ಅಧಿಕಾರಿಗಳು ನಿರ್ಧರಿಸಿದರು.
ನಾಳೆ ಕಾರ್ಖಾನೆಯರಿಗೆ ಇದನ್ನು ಕೇಳಿ ಒಂದು ನೋಟಿಸ ಕೊಟ್ಟು ೨ ದಿನಗಳಲ್ಲಿ ಉತ್ತರ ಕೇಳುತ್ತೇವೆ, ಹಾಗೆ ಒಂದು ವಿಸ್ತೃತವಾದ ವರದಿಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ನೀಡುತ್ತೆವೆ , ನಂತರ ಈ ಕುರಿತು ಕಾನೂನು ಕ್ರಮ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಒಂದು ಟ್ರಾಕ್ಟರ್ ಕಬ್ಬಿನಿಂದ ೫೬೦ ಕೆ.ಜಿ ಮೋಸ ಆಗಿದೆ ಎಂದಾದರೆ ಈ ಮೊದಲು ಬಂಧಿರುವ ಕಬ್ಬಿನ ತೂಕದಲ್ಲು ಮೋಸ ಆಗಿರುವ ಸಾಧ್ಯತೆಗಳಿವೆ, ಈ ಕುರಿತು ತಪಿತಸ್ಥರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಮತ್ತು ಸಕ್ಕರೆ ಸಚಿವರ ಹೇಳಿಕೆಯಂತೆ ೫ ಲಕ್ಷ ಬಹುಮಾನ ಕೊಡಬೇಕು ಎಂದು ಈ ಮೂಲಕ ಒತ್ತಾಯ ಮಾಡುತ್ತೇವೆ ಎಂದರು
ಈ ವೇಳೆ ರೈತ ಮುಖಂಡರಾದ ಸಿದ್ರಾಮಪ್ಪ ರಂಜಣಗಿ, ಧರೆಪ್ಪಗೌಡ ಬಿರಾದಾರ, ಕ.ರ.ವೇ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ತಾಳಿಕೋಟಿ, ರಾಘವೇಂದ್ರ ಹೂಗಾರ, ಸೇರಿದಂತೆ ನೂರಾರು ರೈತರು ಇದ್ದರು.

