ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮೇಲೆ ಎಲ್ಲ ಸದಸ್ಯರು ನಂಬಿಕೆಯಿಟ್ಟು ಏಕಪಕ್ಷೀಯವಾಗಿ ಗೆಲುವಿನ ಉಡುಗೊರೆ ನೀಡಿದ್ದು, ಅವರ ನಂಬಿಕೆ ಹುಸಿಗೊಳಿಸದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನಗರದ ಹಿರಿಯ ಪತ್ರಕರ್ತ ಶ್ರೀಕಾಂತ ಕುಬಸದ ಅವರು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಹಾಗೂ ಹಿರಿಯ ಪತ್ರಕರ್ತರನ್ನು ಗುರುವಾರ ತಮ್ಮ ಮನೆಗೆ ಆಹ್ವಾನಿಸಿ, ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಅಜಾತಶತೃವಿನಂತಿರುವ ಶ್ರೀಕಾಂತ ಕುಬಸದ ಅವರು, ನಮ್ಮನ್ನೆಲ್ಲ ಸನ್ಮಾನಿಸಿ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದಾರೆ. ಅವರ ಆಶಯವನ್ನು ಗೌರವಿಸಿ, ಜಿಲ್ಲೆಯ ಪತ್ರಕರ್ತರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಜಿಲ್ಲಾ ಕೋಶಾಧ್ಯಕ್ಷ ರಾಹುಲ್ ಆಪ್ಟೆ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಸಮೀರ ಇನಾಮದಾರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗುರು ಗದ್ದನಕೇರಿ, ಶ್ರೀನಿವಾಸ ಸೂರಗೊಂಡ, ಹಿರಿಯ ಪತ್ರಕರ್ತರಾದ ಷಡಕ್ಷರಿ ಕಂಪೂನವರ, ಸುನೀಲ ಗೋಡೆನ್ನವರ ಮತ್ತು ಸನ್ನಿ ಗವಿಮಠ ಪಾಲ್ಗೊಂಡಿದ್ದರು.

