ಬಸವನಬಾಗೇವಾಡಿ: ಶರಣರ ಸಂದೇಶಗಳಲ್ಲಿ ಜೀವನ ಮೌಲ್ಯಗಳಿರುವದರಿಂದ ೧೨ ನೇ ಶತಮಾನದ ಬಸವಾದಿ ಶರಣರ ಸಂದೇಶವನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಇಂತಹ ಕಾರ್ಯವನ್ನು ಇಲ್ಲಿನ ನಂದಿ ಸಾಹಿತ್ಯ ವೇದಿಕೆಯು ಮಾಡುತ್ತಿರುವುದು ಶ್ಲಾಘನೀಯ ಎಂದು ತಂಗಡಗಿಯ ಹಡಪದ ಅಪ್ಪಣ್ಣದೇವರ ಸಂಸ್ಥಾನಪೀಠದ ಅನ್ನದಾನಭಾರತಿ ಅಪ್ಪಣ್ಣ ಸ್ವಾಮೀಜಿ ಹೇಳಿದರು.
ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹಾವಿದ್ಯಾಲಯದ ಸಹಯೋಗದಲ್ಲಿ ಸ್ಥಳೀಯ ನಂದಿ ಸಾಹಿತ್ಯ ವೇದಿಕೆಯು ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಎಲ್ಲೆಡೆ ವ್ಯಾಪಕವಾಗಿ ಬೆಳೆದಿದೆ. ಈ ಧರ್ಮದ ಕುರಿತು ಕೆಲವರು ತದ್ವಿರುದ್ಧ ಮಾತನಾಡಿ ಸಮಾಜ ವ್ಯವಸ್ಥೆ ಹಾಳು ಮಾಡುತ್ತಿರುವದು ವಿಷಾದನೀಯ ಸಂಗತಿ. ಬಸವಾದಿ ಶರಣರ ಸಂದೇಶಗಳು ಸಾರ್ವಕಾಲಿಕವಾಗಿ ಸತ್ಯವಾಗಿವೆ. ಇವುಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಜೀವನ ನಮ್ಮದಾಗಿಸಿಕೊಳ್ಳಬೇಕೆಂದರು.
ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳದಲ್ಲಿ ಸ್ಮಾರಕವಾಗಲು ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಅವರು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ನಾವೂ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಹಡಪದ ಅಪ್ಪಣ್ಣನವರ ಸ್ಮಾರಕ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದೇವೆ. ಮಹಾಂತೇಶ ಸಂಗಮ ಅವರು ಎಲ್ಲ ಸಮಾಜದ ಶರಣರ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಕ ಅಶೋಕ ಹಂಚಲಿ ಅವರು ಹಡಪದ ಅಪ್ಪಣ್ಣ, ಹೂಗಾರ ಮಾದಯ್ಯನವರ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಬಸವೇಶ್ವರರು ಎಲ್ಲ ಸಮಾಜದ ಶರಣರಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು. ಹಡಪದ ಅಪ್ಪಣ್ಣನವರು ತಮ್ಮ ಕಾಯಕದೊಂದಿಗೆ ಬಸವೇಶ್ವರರ ಅಪ್ತಕಾರ್ಯದರ್ಶಿಯಾಗಿ ಗುರುತಿಸಿಕೊಂಡಿದ್ದರೆ, ಹೂಗಾರ ಮಾದಯ್ಯನವರು ಶರಣರಿಗೆ ಹೂ ಕೊಡುವ ಕಾಯಕ ಮಾಡುವ ಮೂಲಕ ಎಲ್ಲ ಶರಣರ ಪ್ರೀತಿಗೆ ಪಾತ್ರವಾಗಿದ್ದರು. ಇಂತಹ ಕಾಯಕ ಪ್ರಿಯ ಶರಣರು ಎಲ್ಲರಿಗೂ ಪ್ರೇರಣೆ ನೀಡುತ್ತಾರೆ ಎಂದರು.
ನಂದಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಹಾಂತೇಶ ಸಂಗಮ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ, ವೇದಿಕೆಯ ಬಿ.ವ್ಹಿ.ಚಕ್ರಮನಿ, ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿಯ ನಿರ್ದೇಶಕ ಚಿದಾನಂದ ಹೂಗಾರ ಮಾತನಾಡಿದರು. ಎನ್.ಎಸ್.ಯರನಾಳ ಸ್ವಾಗತಿಸಿದರು. ಪ್ರೊ.ಜೈರಾಂ ದಾವಣಗೆರೆ ನಿರೂಪಿಸಿದರು. ಸಿದ್ದು ಬಾಗೇವಾಡಿ ವಂದಿಸಿದರು.
Related Posts
Add A Comment