ಸಿಂದಗಿಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಸಾರಂಗ ಮಠ ನೀಡಲಾಗುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತವು ವಿಶ್ವಗುರು ಸ್ಥಾನವನ್ನು ಪಡೆಯಬೇಕಾದರೆ ವಿಜ್ಞಾನ–ತಂತ್ರಜ್ಞಾನ, ಜ್ಞಾನಾಧಾರಿತ ಚಿಂತನೆ ಹಾಗೂ ಗುಣಮಟ್ಟದ ಶಿಕ್ಷಣವೇ ಅದರ ಬಲಿಷ್ಠ ಅಡಿಪಾಯವಾಗಬೇಕು ಎಂದು ಖ್ಯಾತ ಪರಮಾಣು ವಿಜ್ಞಾನಿ, ಪದ್ಮಶ್ರೀ–ಪದ್ಮವಿಭೂಷಣ ಪುರಸ್ಕೃತ ಡಾ. ಅನಿಲ್ ಕಾಕೋಡಕರ ಹೇಳಿದರು.
ಅವರು ಸಿಂದಗಿಯ ಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನ ಹಾಗೂ ಸಾರಂಗ ಮಠ–ಸಿಂದಗಿ ವತಿಯಿಂದ ಪ್ರತಿವರ್ಷ ನೀಡಲಾಗುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿ ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳ ಅಭಿವೃದ್ಧಿಗೆ ಬಲ ನೀಡಿದೆ ಎಂದು ಅವರು ತಿಳಿಸಿದರು.
ಸ್ವದೇಶಿ ಸಂಶೋಧನೆ, ನವೀನ ಆವಿಷ್ಕಾರಗಳು ಹಾಗೂ ತಾಂತ್ರಿಕ ಆತ್ಮನಿರ್ಭರತೆಯೇ ಭಾರತದ ಆರ್ಥಿಕ ಬಲವಾಗಬೇಕು ಎಂದು ಅಭಿಪ್ರಾಯಪಟ್ಟ ಅವರು, ಸಂಪನ್ಮೂಲಗಳಿಗಿಂತ ಜ್ಞಾನ ಸಂಪತ್ತಿನ ಮೇಲೆ ವಿಶ್ವಾಸವಿಟ್ಟಾಗ ಮಾತ್ರ ಭಾರತ ಜಾಗತಿಕ ನಾಯಕತ್ವ ಸಾಧಿಸಲಿದೆ ಎಂದರು. ಯುವಜನರಲ್ಲಿ ಅಡಗಿರುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳ ಮಹತ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇಂದಿನ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದ್ದು, ಅದನ್ನು ಭಯಪಡುವ ಬದಲು ವಿವೇಕಪೂರ್ವಕವಾಗಿ ಬಳಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. AI ತಂತ್ರಜ್ಞಾನ ಮಾನವನ ಜ್ಞಾನಶಕ್ತಿಗೆ ಪೂರಕವಾಗಿದ್ದು, ಸರಿಯಾದ ಮೌಲ್ಯಗಳು ಹಾಗೂ ಮಾನವೀಯತೆಯೊಂದಿಗೆ ಬಳಸಿದರೆ ಶಿಕ್ಷಣ, ಆರೋಗ್ಯ, ಸಂಶೋಧನೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನ ಮನುಷ್ಯನನ್ನು ಆಳಬಾರದು, ಮನುಷ್ಯನೇ ತಂತ್ರಜ್ಞಾನವನ್ನು ಸಮಾಜದ ಹಿತಕ್ಕಾಗಿ ನಿಯಂತ್ರಿಸಬೇಕು ಎಂಬುದೇ ಭಾರತದ ಚಿಂತನೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಡಾ. ಅನಿಲ್ ಕಾಕೋಡಕರ ಅವರು ಅರ್ಥಪೂರ್ಣ ಹಾಗೂ ಪ್ರೇರಣಾದಾಯಕ ಉತ್ತರಗಳನ್ನು ನೀಡಿದರು. ವಿಜ್ಞಾನವನ್ನು ಪಠ್ಯವಿಷಯಕ್ಕೆ ಸೀಮಿತಗೊಳಿಸದೆ, ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಶಕ್ತಿಶಾಲಿ ಸಾಧನವಾಗಿ ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮೈಸೂರು ಸಿಎಫ್‌ಟಿಆರ್‌ಐ (CFTRI) ನಿವೃತ್ತ ಉಪನಿರ್ದೇಶಕ ಡಾ. ಪರಮಹಂಸ ಸಾಲಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿತದಲ್ಲಿ ಶೂನ್ಯವನ್ನು ಜಗತ್ತಿಗೆ ಪರಿಚಯಿಸಿದ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದ ಮಹಾನ್ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿ ಭಾಸ್ಕರಾಚಾರ್ಯರ ಹೆಸರಿನಲ್ಲಿ, ಜ್ಞಾನಯೋಗಶ್ರಮದ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಯದಂತೆ ಸಾರಂಗ ಮಠ ರಾಷ್ಟ್ರಮಟ್ಟದ ವಿಜ್ಞಾನಿಗಳಿಗೆ ಪ್ರಶಸ್ತಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾರಂಗ ಮಠದ ಪೂಜ್ಯ ಪ್ರಭು ಸಾರಂಗ ದೇವ ಶಿವಾಚಾರ್ಯರು ಮಾತನಾಡಿ, ರಾಷ್ಟ್ರೀಯ ಭಾಸ್ಕರ ಪ್ರಶಸ್ತಿ ಜ್ಞಾನ, ವಿಜ್ಞಾನ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತುವ ಉದ್ದೇಶ ಹೊಂದಿದ್ದು, ಡಾ. ಅನಿಲ್ ಕಾಕೋಡಕರರಂತಹ ಮಹಾನ್ ವಿಜ್ಞಾನಿಗೆ ಈ ಗೌರವ ಅರ್ಪಿಸಿರುವುದು ಸಾರಂಗ ಮಠಕ್ಕೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದರು. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಸ್ಕಾರಗಳು ಒಂದಾಗಿ ಸಾಗಿದಾಗಲೇ ಭಾರತ ನಿಜಾರ್ಥದಲ್ಲಿ ವಿಶ್ವಗುರುವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ್ ಶಹಾಪೂರ ಹಾಗೂ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

