ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ೩೦ ವರ್ಷಗಳಿಂದ ಮನೆಗಳಿಗೆ ಉತಾರೆ ನೀಡುವಂತೆ ೩೦ಕ್ಕೂ ಹೆಚ್ಚು ಅರ್ಜಿಗಳನ್ನು ನೀಡಿದರೂ ಉತಾರೆ ಕೊಡುತ್ತಿಲ್ಲ. ಮತ್ತು ವಾರ್ಡ್ ನಂ ೧೩ ರಲ್ಲಿ ಬೇರೆ ಊರಿನ ಮತ್ತು ಬೇರೆ ಬೇರೆ ವಾರ್ಡುಗಳ ಮತದಾರರ ಹೆಸರುಗಳನ್ನು ಮತದಾರರ ಯಾದಿಯಲ್ಲಿ ಸೇರಿಸಲಾಗಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಟ್ಟಣದ ಇಂದಿರಾನಗರದ ನಿವಾಸಿಗಳು ಮುಖಂಡ ಬಸವರಾಜ ಕೊಳೂರ ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ ಕಚೇರಿಯ ಆವರಣದಲ್ಲಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದರು.
ಇಂದಿರಾ ನಗರದಿಂದಲೇ ಹೋರಾಟ ಪ್ರಾರಂಭಿಸಿದ ನೂರಾರು ಹೋರಾಟಗಾರರು ಹಲಿಗೆ ಬಡಿಯುತ್ತ, ಬೇಕೆ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೋಗುತ್ತ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಪುರಸಭೆ ಬಳಿಯ ವಾಲ್ಮೀಕಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಸೀಲ್ದಾರ ಕಚೇರಿಯವರೆಗೆ ಸಾಗಿ ಧರಣಿ ಆರಂಭಿಸಿದರು. ಕೆಲ ಸಮಯದ ಬಳಿಕ ಧರಣಿ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ ಕೀರ್ತಿ ಚಾಲಕ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದರ ಧರಣಿ ನಿರತರನ್ನು ಮನವೊಲಿಸುವಲ್ಲಿ ವಿಫಲ ಪ್ರಯತ್ನ ನಡೆಸಿದರು.
ಈ ವೇಳೆ ಧರಣಿ ನಿರತ ಬಸವರಾಜ ಕೊಳೂರ ಮಾಧ್ಯಮದೊಂದಿಗೆ ಮಾತನಾಡಿ, ಎಂಎಲ್‌ಎ ಚುನಾವಣೆ ವೇಳೆ ಇಂದಿರಾನಗರದಲ್ಲಿ ೧೨೫೦ ಓಟಿಂಗ್ ಇದ್ದವು. ಈಗ ಏಕಾಏಕಿ ೧೭೯೩ ಆಗಿವೆ. ಚೆಕ್ ಮಾಡಿದಾಗ ಪಕ್ಕದ ಓಣಿಯ ಮತ್ತು ಹಳ್ಳಿಗಳ ಮತದಾರರು ಇಲ್ಲಿ ಬಂದಿದ್ದಾರೆ. ತಿದ್ದುಪಡಿ ಮಾಡುವಂತೆ ಕಳೆದ ೩ ತಿಂಗಳ ಹಿಂದೆಯೇ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದ್ದೆ. ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ತು ನಾವು ಸ್ಲಂ ಬೋರ್ಡ್ ನಿವಾಸಿಗಳು. ಉತಾರೆ ನೀಡುತ್ತಿಲ್ಲ. ಕೇಳಿದರೆ ಸ್ಟೇ ಇದೆ ಕೊಡುವದಿಲ್ಲ ಅಂತಾರೆ. ಹಾಗಾಗಿ ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವು ಧರಣಿಯಿಂದ ಹಿಂದೆ ಸರಿಯಲ್ಲ ಎಂದರು.
ಇದೇ ವೇಳೆ ಧರಣಿ ನಿರತರ ಪೈಕಿ ಬುಡ್ಡಾ ನಿಡಗುಂದಿ, ರಿಯಾಜ ಉಣ್ಣೀಭಾವಿ, ಮುಹೆಬೂಬ ಮುಲ್ಲಾ ಮತ್ತೀತರರು ಮಾತನಾಡಿ ಬಡಾವಣೆಯ ನಿವಾಸಿಗಳಿಗೆ ಉತಾರೆ ನೀಡದಿರುವದರಿಂದ ಆಗುತ್ತಿರುವ ಸಮಸ್ಯೆಗಳನ್ನು ವಿವರಿಸಿ ಉತಾರೆ ಕೊಡುವವರೆಗೆ ಧರಣಿ ಕೈಬಿಡುವದಿಲ್ಲ ಎಂದರು.
ಸಂಜೆ ಪುರಸಭೆ ಮುಖ್ಯಾಧಿಕಾರಿ ಬಿರಾದಾರ ತಮ್ಮ ಕಚೇರಿಯ ಮ್ಯಾನೇಜರ್ ಹಸನ ದಲಾಯತ್, ಸಿಬ್ಬಂದಿಗಳಾದ ಪ್ರಸನ್ನ ಅವಟಿ, ಅಜಿತ ಹಳಿಂಗಳಿ, ಸೈಫನ್ ಮಾನ್ಯಾಳ, ಗುರುಬಸಯ್ಯ ಹಿರೇಮಠ, ಜಾವೀದ ನಾಯ್ಕೋಡಿ ಸಮೇತ ಧರಣಿ ಸ್ಥಳಕ್ಕೆ ಭೇಟಿನೀಡಿ ಉತಾರೆ ನೀಡದ ಹಿನ್ನೆಲೆ ಇಲಾಖೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಲಿಖಿತ ಹೇಳಿಕೆ ತಯಾರಿಸಿಕೊಂಡು ಬಂದು ಧರಣಿ ನಿರತರ ಮನವೊಲಿಸಲು ಪ್ರಯತ್ನಿಸಿದರು. ಮುಖ್ಯಾಧಿಕಾರಿ ಎಷ್ಟೇ ಪ್ರಯತ್ನಿಸಿದರೂ ಧರಣಿ ನಿರತರು ತಮ್ಮ ಪಟ್ಟು ಬಿಡಲಿಲ್ಲ. ಕೊನೆಗೆ ಮುಖ್ಯಾಧಿಕಾರಿ ನಮ್ಮ ಪತ್ರಕ್ಕೆ ಸ್ವೀಕೃತಿಯನ್ನಾದರೂ ಕೊಡಿ ಎಂದಾಗ ಸ್ವೀಕೃತಿ ನೀಡಿ ನಾವು ಕೇವಲ ಸ್ವೀಕೃತಿ ನೀಡುತ್ತಿದ್ದೇವೆ ಹೊರತು ಧರಣಿಯನ್ನು ಅಂತ್ಯಗೊಳಿಸಿಲ್ಲ. ಮುಖ್ಯಾಧಿಕಾರಿ ನೀಡಿದ ದಾಖಲೆಯನ್ನು ಪರಿಶೀಲಿಸಿ ಮುಂದಿನ ತೀರ್ಮಾನಕ್ಕೆ ಬರುವದಾಗಿ ಮುಖ್ಯಾಧಿಕಾರಿ ಎದುರೇ ಧರಣಿ ನಿರತರು ತಿಳಿಸಿದರು.
ಬಳಿಕ ದಾಖಲೆ ಪರಿಶೀಲಿಸಿದ ಧರಣಿ ನಿರತರು ಮುಖ್ಯಾಧಿಕಾರಿಗಳು ನಮಗೆ ಸಮರ್ಪಕ ದಾಖಲೆಗಳನ್ನು ಒದಗಿಸಿಲ್ಲ. ಪತ್ರದಲ್ಲಿ ನ್ಯಾಯಾಲಯದ ಪ್ರಕರಣಗಳ ಬಗ್ಗೆ ಉಲ್ಲೇಖಿಸಿದ್ದು ಸ್ಟೇ ಪ್ರತಿಯನ್ನು ನೀಡಿಲ್ಲ. ನ್ಯಾಯಾಲಯದ ಅರ್ಜಿಯ ಪ್ರತಿಯನ್ನೂ ಪೂರ್ತಿಯಾಗಿ ನೀಡದೇ ನಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಹಾಗಾಗಿ ಈ ಧರಣಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾಗುತ್ತದೆ ಎಂದು ಆಕ್ರೋಷ ಹೊರಹಾಕಿದರು.
ಹೋರಾಟದಲ್ಲಿ ವಿಷ್ಣು ಗಂಗಾಪೂರ, ಶೇಖರ ಢವಳಗಿ, ಅಮರೇಶ ಉಪಲದಿನ್ನಿ, ಸುಜಾತಾ ಸಿಂಧೆ, ಬಾಬು ಬಳಗಾನೂರ, ಶ್ರೀನಿವಾಸ ಕಲಾಲ, ಮಂಜುನಾಥ ಚಲವಾದಿ, ನಾಗೇಶ ಜಾಧವ, ರುದ್ರೇಶ ಮುರಾಳ, ಮರುಳೀಧರ ಹಾದಿಮನಿ, ಮಹೆಬೂಬ ಮುಲ್ಲಾ, ತ್ರಿವೇಣಿ ಬೆನಕಟ್ಟಿ, ಅಲ್ಲಾಭಕ್ಷ ಬೀಳಗಿ, ತೋಸೀಫ್ ಬೀಳಗಿ, ಆಸೀಫ ನಿಡಗುಂದಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು. ಪಿಎಸ್ಐ ಸಂಜಯ ತಿಪರೆಡ್ಡಿ, ಕ್ರೈಂ ಪಿಎಸ್‌ಐ ರಂಗಪ್ಪ ಭಂಗಿ ಬಂದೋಬಸ್ತ ವಹಿಸಿದ್ದರು.

