ಸಿದ್ಧಸಿರಿ ಸಂಸ್ಥೆ ಕುರಿತು ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿ ನ್ಯಾಯಾಲಯದಿಂದ ಮಧ್ಯಂತರ ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಎಲ್ಲರಿಗೂ ಚಿರ ಪರಿಚಿತವಾದ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ಶಾಖೆಗಳನ್ನು ಹೊಂದಿರುವ ಸಿದ್ಧಸಿರಿ ಸೌಹಾರ್ದ ಸಹಕಾರಿ ಈಗ ಕೇಂದ್ರ ಸರ್ಕಾರದ ಅಡಿ ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿ. ಆಗಿ ನೋಂದಣಿಯಾಗಿರುವದು ಎಲ್ಲ ಗ್ರಾಹಕರಿಗೆ ಮತ್ತು ನಿರ್ದೇಶಕ ಮಂಡಳಿಗೆ ಅತ್ಯಂತ ಸಂತಸದ ಸಂಗತಿ.
ಆದರೆ ಇತ್ತಿತ್ತಲಾಗಿ ನಮ್ಮ ಸೊಸೈಟಿಯ ಒಬ್ಬ ನೌಕರನಾದ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಎನ್ನುವ ವ್ಯಕ್ತಿ ನಮ್ಮ ಸೊಸೈಟಿ ಕುರಿತಂತೆ ಫೇಸ್‌ಬುಕ್ (Facebook) ನಲ್ಲಿ ಕೆಲವು ಪೋಸ್ಟಗಳನ್ನು ಹಾಕುತ್ತಾ ನಮ್ಮ ಸೊಸೈಟಿ ನೀಡಿದ ಒಂದು ಪತ್ರವನ್ನು ಪ್ರದರ್ಶಿಸಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದು ನಮ್ಮ ಸಂಸ್ಥೆಯ ಗಮನಕ್ಕೆ ಬಂದಿದ್ದು, ಇದರಿಂದಾಗಿ ನಮ್ಮ ಗ್ರಾಹಕರಲ್ಲಿ ಕೆಲವು ಪ್ರಶ್ನೆಗಳು ಉದ್ಭವಿಸಿರುವುದರಿಂದ ಈ ಪತ್ರಿಕಾ ಪ್ರಕಟಣೆ ಮುಖಾಂತರ ಎಲ್ಲ ವಿಷಯಗಳನ್ನು ಸ್ಪಷ್ಟಪಡಿಸಲು ಆಡಳಿತ ಮಂಡಳಿ ನಿರ್ಧರಿಸಿದಂತೆ ಈ ಪತ್ರಿಕಾ ಪ್ರಕಟಣೆ ನೀಡಲಾಗುತ್ತಿದೆ.
ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಅಧ್ಯಕ್ಷರಾದ ಜನಪ್ರಿಯ ವಿಜಯಪುರ ನಗರ ಶಾಸಕರಾದ ಶ್ರೀ ಬಸನಗೌಡ ರಾಮನಗೌಡ ಪಾಟೀಲ (ಯತ್ನಾಳ) ಅವರ ನೇತೃತ್ವದಲ್ಲಿ ಸಂಸ್ಥೆಯು ರೂ. 4,758/- ಕೋಟಿ ರೂಪಾಯಿಗಳಷ್ಟು ಠೇವಣಿ, ರೂ. 79.26 ಕೋಟಿ ರೂಪಾಯಿಗಳಷ್ಟು ಷೇರು ಬಂಡವಾಳ, ಒಟ್ಟು 84,195 ಸದಸ್ಯರನ್ನು ಮತ್ತು ಕರ್ನಾಟಕ ರಾಜ್ಯಾದ್ಯಂತ 211 ಶಾಖೆಗಳನ್ನು ಹೊಂದಿದ್ದು, ಅಲ್ಲದೇ ಚಿಂಚೋಳಿಯಲ್ಲಿ ಬೃಹತ ಗಾತ್ರದ ಎಥೆನಾಲ್ ಮತ್ತು ಪವರ ಘಟಕ ಸ್ಥಾಪಿಸಿದ್ದು, ಹೀಗೆ ಹತ್ತು ಹಲವಾರು ಕಾರ್ಯಗಳೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಶಕ್ತಿಯನ್ನು ನೀಡಲು ಶ್ರಮಿಸುತ್ತಿರುವ ನಮ್ಮ ಸಂಸ್ಥೆ ಸಹಕಾರಿ ಕ್ಷೇತ್ರದಲ್ಲಿ ಒಂದು ಅಭೂತಪೂರ್ವ ಕ್ರಾಂತಿ ಮಾಡುತ್ತಿದೆ.
ನಮ್ಮ ಸೊಸೈಟಿಯ ನೌಕರನಾದ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಎನ್ನುವ ವ್ಯಕ್ತಿ ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಮಾರು 28 ಜನ ನೌಕರರು ಸಂಸ್ಥೆಗೆ ನೀಡಿದ ಭದ್ರತಾ ಠೇವಣಿಯನ್ನು ಸಂಸ್ಥೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡ ಬಗ್ಗೆ ನಮ್ಮ ನೌಕರರು ನೀಡಿದ ದೂರಿನನ್ವಯ ವಿಚಾರಿಸಲಾಗಿ ಸದರಿ ಅಧಿಕಾರಿ ಹಣಕಾಸಿನ ಅಕ್ರಮ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ನಂತರ ಸಂಸ್ಥೆ ಸದರಿ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಈತನಿಗೆ ಕಾರಣ ಕೇಳಿ ನೋಟಿಸು ನೀಡಿದ್ದು, ಸದರಿ ನೋಟಿಸು ಮುಟ್ಟಿದ ನಂತರ ತನ್ನ ಮೇಲಿನ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಸನಗೌಡ ರಾಮನಗೌಡ ಪಾಟೀಲ (ಯತ್ನಾಳ) ಇವರ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುವುದು ಮತ್ತು ನಮ್ಮ ಸಂಸ್ಥೆ ಆತನ ಸಾಲ ಮರುಪಾವತಿ ಮಾಡಿದ್ದಕ್ಕಾಗಿ ನೀಡಿದ ಸಾಲದ ಬೇ-ಬಾಕಿ ಪ್ರಮಾಣ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ತಾನು ತನ್ನ ನೌಕರಿ ಸಂದರ್ಭದಲ್ಲಿ ಯಾವುದೇ ಅವ್ಯವಹಾರ ಎಸಗಿಲ್ಲ ಹೀಗಾಗಿ ತನಗೆ ಸಂಸ್ಥೆ ಕ್ಲೀನ್ ಚಿಟ್ ನೀಡಿದೆ ಎಂಬಂತೆ ಪ್ರದರ್ಶಿಸಿ, ಜನರ ಮಧ್ಯೆ ಸುಳ್ಳು ಮಾಹಿತಿ ಹಬ್ಬಿಸುವುದು ಪ್ರಾರಂಭಿಸಿದಾಗ ಅನಿವಾರ್ಯವಾಗಿ ಸದರಿ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ವಿರುದ್ಧ ವಿಜಯಪುರದ ಮಾನ್ಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ OS.No.1378/2025 ಎಂಬ ದಾವೆ ದಾಖಲಿಸಿದ್ದು. ಅದರಲ್ಲಿ ಮಾನ್ಯ ನ್ಯಾಯಾಧೀಶರು ಮಧ್ಯಂತರ ಅರ್ಜಿಯ ಮೇಲೆ ದಿನಾಂಕ: 19-12-2025 ರಂದು ಆದೇಶ ಮಾಡಿ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಯಾಗಲಿ ಅಥವಾ ಆತನ ಪರವಾಗಿ ಯಾರೇ ಆಗಲಿ ನಮ್ಮ ಸಂಸ್ಥೆಗೆ ಸಂಬಂಧಿಸಿದಂತೆ ಅಥವಾ ಅದರ ಅಧ್ಯಕ್ಷರು. ಸಿ.ಇ.ಓ., ನಿರ್ದೇಶಕರು ಅಥವಾ ಇನ್ನಾವುದೇ ಅಧಿಕಾರಿಗಳ ವಿರುದ್ಧ ದುರುದ್ದೇಶದಿಂದ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನಾಗಲಿ ಅಥವಾ ಸಂಸ್ಥೆಯ ಅಧ್ಯಕ್ಷರು, ಸಿ.ಇ.ಓ. ನಿರ್ದೇಶಕರು ಅಥವಾ ಇನ್ನಾವುದೇ ಅಧಿಕಾರಿಗಳ ಘನತೆಗೆ ಮತ್ತು ಸಂಸ್ಥೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಯಾವುದೇ ಮಾಧ್ಯಮ/ಮೀಡಿಯಾದ ಮುಖಾಂತರ ಯಾವುದೇ ಪತ್ರಿಕೆಗಳಾಗಲಿ, ಸೋಷಿಯಲ್ ಮೀಡಿಯಾ ಆಗಲಿ ಅಥವಾ ಇನ್ನಾವುದರ ಮುಖಾಂತರ ಪ್ರಚುರ ಪಡಿಸುವುದಾಗಲಿ ಮಾಡದಂತೆ ಪ್ರತಿಬಂಧಿಸಿ ಆದೇಶಿಸಿದ್ದು, ಮಾನ್ಯ ನ್ಯಾಯಾಲಯ ಮುಂದುವರೆದು, ನಮ್ಮ ಸಂಸ್ಥೆಯ ಗ್ರಾಹಕರ ಖಾತೆಗಳ ಕುರಿತಂತೆ, ಸಂಸ್ಥೆಯ ಹಣಕಾಸಿನ ವ್ಯವಹಾರಗಳ ಕುರಿತಂತೆ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಯಾಗಲಿ ಅಥವಾ ಆತನ ಪರವಾಗಿ ಯಾರೇ ಆಗಲಿ ಒಟ್ಟಾರೆ ನಮ್ಮ ಸಂಸ್ಥೆಯ ಕುರಿತಂತೆ ಯಾವುದೇ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಿ ಮಧ್ಯಂತರ ಆದೇಶ ನೀಡಿದ್ದು ಇರುತ್ತದೆ.
ಇದೇ ಸಂದರ್ಭದಲ್ಲಿ ಮಾನ್ಯ ನ್ಯಾಯಾಲಯ ಎಲ್ಲ ಮಾಧ್ಯಮಗಳಿಗೂ ಸಹ ನಿರ್ದೇಶನ ನೀಡಿದ್ದು, ಯಾವುದೇ ಮಾಧ್ಯಮ ಅಂದರೆ ಮುದ್ರಣ ಮಾಧ್ಯಮ (Print Media) ಪ್ರಸಾರ ಮಾಧ್ಯಮ (Broadcast Media) / (Digital/Internet Media) ಗಳನ್ನು ಒಳಗೊಂಡಂತೆ ಯಾವುದೇ ಮಾಧ್ಯಮಗಳು ನಮ್ಮ ಸಂಸ್ಥೆಗೆ ಸಂಬಂಧಿಸಿದ ಸದರಿ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ನೀಡುವ ಯಾವುದೇ ಮಾಹಿತಿಗಳನ್ನು ಸ್ವೀಕರಿಸದಂತೆ ನಿರ್ಬಂಧಕ ಆದೇಶ ಮಾಡಿರುತ್ತಾರೆ. ನಮ್ಮ ಸಂಸ್ಥೆಯ ಪರವಾಗಿ ನಮ್ಮ ಕಾನೂನು ಸಲಹೆಗಾರರಾದ ಸತೀಶ್ಚಂದ್ರ ಜಿ. ಕುಲಕರ್ಣಿ, ವಕೀಲರು ವಕಾಲತ್ತು ವಹಿಸಿದ್ದು, ಇರುತ್ತದೆ.
ಆದ್ದರಿಂದ ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ಮತ್ತು ವಿಶೇಷವಾಗಿ ರಾಘವ ಅಣ್ಣಿಗೇರಿ (ರಾಘವೇಂದ್ರ ಭೀ. ಅಣ್ಣಿಗೇರಿ) ಈತನಿಗೆ ಈ ಮೂಲಕ ಗಮನಕ್ಕೆ ತರುವುದೇನೆಂದರೆ ನಮ್ಮ ಸಂಸ್ಥೆಯ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವುದನ್ನು ಮತ್ತು ಸೋಷಿಯಲ್ ಮಿಡಿಯಾದಲ್ಲಿ ಪ್ರಚುರ ಪಡಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಪೋಸ್ಟ್ ಮಾಡಲಾದ ಹೇಳಿಕೆಗಳನ್ನು ತೆಗೆದು ಹಾಕಬೇಕು ಇಲ್ಲವಾದಲ್ಲಿ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ-ಆಪರೇಟಿವ್ ಸೊಸೈಟಿ ನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

