ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ, ಹತ್ಯೆ ನಡೆದಿರುವದು ಖಂಡನೀಯ. ಇಂತಹ ಘಟನೆಗಳು ನಡೆದರೆ ದೇಶದ ಮಕ್ಕಳ, ಯುವಜನಾಂಗದ ಮೇಲೆ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳಬೇಕಿದೆ. ನಮ್ಮ ಸರ್ಕಾರವು ಇದರ ಕಡೆಗೆ ಗಮನ ಹರಿಸಬೇಕೆಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದು ಪರಿಷದ್, ಬಜರಂಗದಳವು ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದುಗಳ ಶೀಘ್ರ ರಕ್ಷಣೆ ಮಾಡುವಂತೆ ಆಗ್ರಹಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದುಗಳ ಮೇಲೆ ಇಂತಹ ಘಟನೆ ನಡೆದಿರುವದು ಖಂಡನೀಯ. ಹಿಂದುಗಳ ಮೇಲಿನ ಹತ್ಯಾಕಾಂಡ ನಿಲ್ಲಿಸಲು ಕ್ರಮಕೈಗೊಳ್ಳುವಂತೆ ಬಾಂಗ್ಲಾ ಸರ್ಕಾರದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
ವಕೀಲ ರಾಚಯ್ಯ ಗಣಕುಮಾರ ಮಾತನಾಡಿ, ಪಾಪಿ ಪಾಕಿಸ್ತಾನದ ಪ್ರಚೋದನೆಯಿಂದ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ಇಂತಹ ಘಟನೆ ನಡೆಯುತ್ತಿದೆ. ನಮ್ಮ ದೇಶದಲ್ಲಿ ಎಲ್ಲ ಜಾತಿಯವರು ಒಂದಾಗಿ ಬಾಳುತ್ತಿದ್ದಾರೆ. ನಮ್ಮ ದೇಶದ ಸಂಸ್ಕ್ರತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ವಸುದೈವ ಕುಟುಂಬಕಂ ಎಂಬ ಸಂಸ್ಕ್ರತಿ ನಮ್ಮದು. ಇಂತಹ ಸಂಸ್ಕ್ರತಿಗೆ ಸೇರಿದ ಒರ್ವ ಹಿಂದು ವ್ಯಕ್ತಿಯನ್ನು ಬಾಂಗ್ಲಾದೇಶದಲ್ಲಿ ಹತ್ಯೆ ಮಾಡಿರುವದು ತುಂಬಾ ನೋವಿನ ಸಂಗತಿ. ಇದನ್ನು ಸಮಸ್ತ ಹಿಂದುಗಳು ಖಂಡಿಸುತ್ತಾರೆ. ಹಿಂದುಗಳು ದೇಶಭಕ್ತರಾಗಿದ್ದಾರೆ. ನಮ್ಮ ದೇಶದ ಮೇಲೆ ಸಾಕಷ್ಟು ವಿದೇಶಿಯರು ಆಕ್ರಮಣ ಮಾಡಿದರೂ ನಮ್ಮ ದೇಶದ ಸಂಸ್ಕ್ರತಿ ಅಳೆದುಹೋಗಿಲ್ಲ. ಬಾಂಗ್ಲಾದೇಶದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಹತ್ಯೆ ಮಾಡಿರುವದು ಖಂಡನೀಯ. ಇಂತಹ ಘಟನೆಗಳು ಎಂದಿಗೂ ಜರುಗಬಾರದು. ಸಮಸ್ತ ಹಿಂದುಗಳು ಎಚ್ಚೆತ್ತುಕೊಂಡು ಇಂತಹ ಘಟನೆ ಖಂಡಿಸಬೇಕಿದೆ ಎಂದರು.
ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ ಬರದೆ ಮನವಿ ಪತ್ರದಲ್ಲಿ ಒಂದು ಕಾಲದಲ್ಲಿ ಹಿಂದುಸ್ಥಾನದ ಭಾಗವಾಗಿರುವ ಬಾಂಗ್ಲಾದೇಶದಲ್ಲಿ ವಾಸಿಸುವ ಹಿಂದುಗಳ ನರಮೇಧ ಅತಿಯಾಗಿ ನಡೆಯುತ್ತಿರುವದು ಮಾನವೀಯತೆ ಇಲ್ಲದೇ ಕ್ರೂರವಾಗಿ ಹತ್ಯೆ ಮಾಡುತ್ತಿರುವುದನ್ನು ಈ ಮೂಲಕ ಉಗ್ರವಾಗಿ ವಿಶ್ವಹಿಂದು ಪರಿಷತ್, ಭಜರಂಗದಳದ ತಾಲೂಕು ಘಟಕವು ತೀವ್ರವಾಗಿ ಖಂಡಿಸುತ್ತದೆ. ಭಾರತವನ್ನು ಹೊರತಪಡಿಸಿ ಹಿಂದುಗಳಿಗೆ ವಾಸಿಸಲು ಬೇರೆಯಾದ ದೇಶಗಳು ಸುರಕ್ಷಿತವಾಗಿ ಉಳಿದಿಲ್ಲ. ಭಾರತೀಯರಾದ ನಾವುಗಳು ಯಾವತ್ತೂ ಯಾರ ಮೇಲೆಯೂ ಅನವಶ್ಯಕವಾಗಿ ದಾಳಿ ಮಾಡಿದ ಉದಾಹರಣೆಗಳು ಇತಿಹಾಸದಲ್ಲಿ ಇರುವುದಿಲ್ಲ. ದಾಸ ಎಂಬ ಹಿಂದುವನ್ನು ಪೋಲಿಸರ ಸರ್ಪಗಾವಲಿನಲ್ಲಿಯೇ ಕ್ರೂರವಾಗಿ ಹಲ್ಲೆ ಮಾಡಿ ಗಿಡಕ್ಕೆ ಕಟ್ಟಿ ಜೀವಂತವಾಗಿ ಪಟ್ಟಿರುವುದು ಇದು ಒಂದು ಜೆಹಾದಿ ಕೃತ್ಯವಾಗಿದೆ. ಅಲ್ಲದೇ ಹಿಂದುಗಳ ಮನೆಗಳಿಗೆ ಬೆಂಕಿ ಇಟ್ಟಿರುವುದು ಸಹ ನಡೆದಿದೆ. ಹಿಂದು ದೇವಾನುದೇವತೆಗಳ ರಕ್ಷಣೆ ಇಲ್ಲದಂತಾಗಿದೆ. ಹಿಂದುಗಳು ಬದುಕುವದು ತುಂಬಾ ಭಯಾನಕವಾಗಿದೆ. ಅಕ್ರಮವಾಗಿ ನಮ್ಮ ದೇಶದಲ್ಲಿ ಬಾಂಗ್ಲಾದೇಶದ ಜನರು ಬಂದು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅಲ್ಲಿರುವ ಹಿಂದುಗಳ ಬದುಕು ಅಯೋಮಯವಾಗಿ ಮಾರ್ಪಟ್ಟಿದೆ.ಕೂಡಲೇ ಕೇಂದ್ರ ಸರ್ಕಾರವು ಬಾಂಗ್ಲಾದೇಶದಲ್ಲಿರುವ ಹಿಂದುಗಳ ರಕ್ಷಣೆಗೆ ಶೀಘ್ರವೇ ಧಾವಿಸಬೇಕು. ಅಲ್ಲಿರುವ ಹಿಂದುಗಳನ್ನು ಭಾರತಕ್ಕೆ ಕರೆತಂದು ಭಾರತೀಯ ಪೌರತ್ವ ಒದಗಿಸಿ ಕೊಡಬೇಂದು ಆಗ್ರಹಿಸಲಾಗಿದೆ.
ಪ್ರತಿಭಟನೆಕಾರರು ಪಟ್ಟಣದ ಮಾರುತಿ ದೇವಸ್ಥಾನದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿ ರಾಣಿಚೆನ್ನಮ್ಮ ವೃತ್ತದವರೆಗೂ ತೆರಳಿ ಬಸವೇಶ್ವರ ವೃತ್ತ ಮಾರ್ಗವಾಗಿ ಬಸ್ ನಿಲ್ದಾಣದವರೆಗೂ ತೆರಳಿ ಮತ್ತೆ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಬಾಂಗ್ಲಾದೇಶದ ಮುಖ್ಯಮಂತ್ರಿ, ದೇಶದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ್ದ ಶಿರಸ್ತೇದಾರ ದೊಡಮನಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ವಿಶ್ವಹಿಂದು ಪರಿಷದ್, ಭಜರಂಗದಳ ತಾಲೂಕು ಸಂಯೋಜಕ ರಾಹುಲ ಜಗತಾಪ, ನಗರ ಘಟಕ ಅಧ್ಯಕ್ಷ ಬಸವರಾಜ ಅಳ್ಳಗಿ, ತಾಲೂಕು ಉಪಾಧ್ಯಕ್ಷ ನಿಂಗಣ್ಣ ಬಡಿಗೇರ, ಕಿರಣ ಕುಲಕರ್ಣಿ, ಪ್ರಕಾಶ ಡೆಂಗಿ, ಚನ್ನಬಸು ಶಿವಗೊಂಡ, ಯುವರಾಜ ರಾಠೋಡ, ಅಭಿಷೇಕ ಪವಾರ, ಯಮನೂರಿ ಜಮಖಂಡಿ, ಪದ್ಮರಾಜ ಒಡೆಯರ, ವಿರೇಶ ಹಿರೇಮಠ, ಅಪ್ಪು ಭೂತನಾಳ, ಭಾಗ್ಯವಂತ ಇಂಗಳೇಶ್ವರ, ವಿಜಯ ಗೊಳಸಂಗಿ, ಶ್ರೀಶೈಲ ಸಣಬೆಂಕಿ, ಸಂಗಮೇಶ ಮಡಿವಾಳರ, ಶಿವು ಬೆಲ್ಲದ, ರಾಘು ದೊಡಮನಿ, ಮಲ್ಲು ಕೋಲಕಾರ, ಶರಣು ನಿಡಗುಂದಿ, ಆನಂದ ಸುಂಕದ, ವಿರೇಶ ಗಬ್ಬೂರ, ಬಸವರಾಜ ಇಂಗಳೇಶ್ವರ, ಸಚೀನ ಅರಸನಾಳ, ಸಿದ್ದು ಜಾಡರ, ನಂದೀಶ ಗೊಳಸಂಗಿ ಇತರರು ಇದ್ದರು.

