ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾರವಾಡ ಮತ್ತು ಸುತ್ತಮುತ್ತಲಿನ ತೊನಶ್ಯಾಳ, ದದಾಮಟ್ಟಿ, ಹೊನಗನಹಳ್ಳಿ, ಸವನಹಳ್ಳಿ, ಅತಾಲಟ್ಟಿ, ತೊರವಿ ಮುಂತಾದ ಗ್ರಾಮಗಳಿಗೆ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆ 2ನೇ ಹಂತದಲ್ಲಿ ನೀರಾವರಿ ಸೌಲಭ್ಯ ಒದಗಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ರೂ. 10 ಕೋ. ಅನುದಾನದಲ್ಲಿ ಸಾರವಾಡ – ಬಬಲೇಶ್ವರ ರಸ್ತೆಯ ಹಲಗಣಿ ಕ್ರಾಸ್ ವರೆಗೆ ಸುಧಾರಣೆ ಕಾಮಗಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ರೂ. 2 ಕೋ. ಅನುದಾನದಲ್ಲಿ ಸಾರವಾಡ – ತೊನಶ್ಯಾಳ ರಸ್ತೆ ಸುಧಾರಣೆ ಕಾಮಗಾರಿ, ಲೋಕೋಪಯೋಗಿ ಇಲಾಖೆಯ ರೂ. 5 ಕೋ. ಅನುದಾನದಲ್ಲಿ ಸಾರವಾಡ – ದದಾಮಟ್ಟಿ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ, ರೂ.2 ಕೋ. ವೆಚ್ಚದ ಡೋಣಿ ನದಿಯಲ್ಲಿರುವ ಹೂಳೆತ್ತುವ ಕಾರ್ಯಕ್ಕೆ ಚಾಲನೆ, ರೂ. 1 ಕೋ. ವೆಚ್ಚದಲ್ಲಿ ಚಿಕ್ಕಪ್ಪಯ್ಯ ಗುಡಿ ರಸ್ತೆ ಸುಧಾರಣೆ ಕಾಮಗಾರಿ ಭೂಮಿ ಪೂಜೆ, ಎಂ.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಆಟಿಕೆ ಸಾಧನಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬಾಕಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಮಾಡಲಾಗುವುದು. ಬಬಲೇಶ್ವರ ಮತಕ್ಷೇತ್ರದಲ್ಲಿ ಸಾರವಾಡ ಗ್ರಾಮ ಹೃದಯದಲ್ಲಿದೆ. ಈ ಗ್ರಾಮಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಈ ಗ್ರಾಮಸ್ಥರ ಉಪಕಾರ ನನ್ನ ಮೇಲೆ ಇದೆ. 2018ರಲ್ಲಿ ಪ್ರದಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ ಶಾ ಇಲ್ಲಿಗೆ ಬಂದು ನನ್ನನ್ನು ಸೋಲಿಸಲು ಭರ್ಜರಿ ಪ್ರಚಾರ ಮಾಡಿದರೂ ಸಾರವಾಡ ಗ್ರಾಮಸ್ಥರು ನನಗೆ 1600 ಮತಗಳ ಲೀಡ್ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಹೇಳಿದರು.
ಸಾರವಾಡ ಈಶ್ವರ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಹಂತದಲ್ಲಿ ತಲಾ ರೂ. 50 ಲಕ್ಷದಂತೆ ಒಟ್ಟು ರೂ. 1 ಕೋ. ಅನುದಾನ ನೀಡುತ್ತೇನೆ. ಮತಕ್ಷೇತ್ರದ 100 ಸರಕಾರಿ ಶಾಲೆಗಳ ಪೈಕಿ ಈಗಾಗಲೇ 58 ಶಾಲೆಗಳಲ್ಲಿ ಕ್ರೀಡಾ ಸಲಕರಣೆಗನ್ನು ಅಳವಡಿಸಲಾಗಿದೆ. ಸಾರವಾಡದಲ್ಲಿ ಟೊಯೊಟಾ ಕಿರ್ಲೋಸ್ಕರ್ ಸಿ.ಎಸ್.ಆರ್ ಅನುದಾನದಲ್ಲಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಮಾಡಲಾಗುವುದು. ಬಾಲಕಿಯರ ಮತ್ತು ಉರ್ದು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು. ಪ್ರಗತಿಪಥ ಯೋಜನೆಯಡಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾರವಾಡದಲ್ಲಿ 110 ಕೆವಿ ಸ್ಟೇಷನ್ ನಿರ್ಮಾಣ, ಡೋಣಿ ಸೇತುವೆ ಅಗಲೀಕರಣ ಮಾಡಲಾಗುವುದು. ಗ್ರಾಮದಲ್ಲಿ ಮೂರು ಎಕರೆಯಲ್ಲಿ ಸುಸಜ್ಜಿತವಾಗಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ 123 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು. ದದಾಮಟ್ಟಿ- ಜುಮನಾಳ ಕ್ರಾಸ್ ರಸ್ತೆ ಅಭಿವೃದ್ಧಿ, ಬಸ್ ನಿಲ್ದಾಣ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಡೋಣಿ ನದಿ ಹೂಳೆತ್ತುವ ಕಾಮಗಾರಿ ಮಾಡಲಾಗುವುದು. ಡೋಣಿ ನದಿ ಹೂಳೆತ್ತುವ ಯೋಜನೆ ಪರಿಷ್ಕೃತ ಯೋಜನೆಯನ್ನು ಕೇಂದ್ರ ಸರಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಒಂದು ವರ್ಷದೊಳಗೆ ಸಾರವಾಡ ಗ್ರಾಮಸ್ಥರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ. ಜಿಲ್ಲೆಗೆ ಐದಾರು ಕೈಗಾರಿಕೆಗಳು ಇಲ್ಲಿಗೆ ಬರಲಿವೆ. ವೈಜ್ಞಾನಿಕ ಕೃಷಿ ಕೈಗೊಳ್ಳಲು ಅಕ್ಷಯ ಕಲ್ಪ ಸಂಘಟನೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಹೈನುಗಾರಿಕೆ ಉತ್ತೇಜನ ನೀಡಲಾಗುವುದು ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಮುಖಂಡರಾದ ಚನ್ನಪ್ಪ ಕೊಪ್ಪದ, ಸೋಮನಾಥ ಕಳ್ಳಿಮನಿ, ರೈತ ಕಂಟೆಪ್ಪ ಕಣಬೂರ ಮಾತನಾಡಿದರು.
ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಅನನ್ಯ ವಾಲಿ ಸಚಿವ ಎಂ. ಬಿ. ಪಾಟೀಲ ಅವರ ಕುರಿತು ಸ್ವರಚಿತ ಕವನ ವಾಚಿಸಿದರು.
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಸೊಕ್ಕೆ ಅತಿಥಿಮಠದ ಶ್ರೀ ಜಸಾರಂಗಪ್ಪಯ್ಯ ಮಹಾಸ್ವಾಮಿಗಳು, ಸಾರವಾಡ ಹಿರೇಮಠ ಶ್ರೀ ರೇಣುಕಸ್ವಾಮಿಗಳು ಹಿರೇಮಠ, ಬಬಲೇಶ್ವರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಸದಾಶಿವ ಚಿಕರೆಡ್ಡಿ, ಶರಣಪ್ಪ ಬಿದರಿ, ಈಶ್ವರ ಇನಾಮದಾರ, ಡಾ. ಗಂಗಾಧರ ಸಂಬಣ್ಣಿ, ಗ್ರಾ. ಪಂ ಅಧ್ಯಕ್ಷ ಎಂ. ಎಸ್ ಪಾಟೀಲ, ಈಶ್ವರಪ್ಪ ಚಿಕರೆಡ್ಡಿ, ಜಯಗೌಡ ಪಾಟೀಲ, ಶಶಿಧರ ಬಿದರಿ, ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಸಿ. ಎಸ್. ಪೋಲಿಸಪಾಟೀಲ, ಗದಿಗೆಪ್ಪ ಕಲಾದಗಿ, ಸಾರವಾಡ, ದದಾಮಟ್ಟಿ, ಕಣಮುಚನಾಳ ಗ್ರಾಮಸ್ಥರು, ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

” ಬಬಲೇಶ್ವರ ಮತಕ್ಷೇತ್ರ ರಾಜ್ಯದ 224 ಮತಕ್ಷೇತ್ರಗಳಲ್ಲಿ ಜನಪ್ರೀಯ ಮತ್ತು ಜನಾನುರಾಗಿಯಾಗಿದೆ. ಇದಕ್ಕೆ ಸಚಿವ ಎಂ. ಬಿ. ಪಾಟೀಲ ಅವರು ಕಾರಣ. ಅಭಿವೃದ್ಧಿಯ ಮೂಲಕ ಜನರಲ್ಲಿ ಮನಪರಿವರ್ತನೆ ಮಾಡಿದ್ದಾರೆ. ಜಾತ್ಯತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ತಾಯಿ ಹೃದಯದ ಜನನಾಯಕರಾಗಿದ್ದಾರೆ.”
– ಸಂಗಮೇಶ ಬಬಲೇಶ್ವರ
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರು

