ಹಂದಿಗನೂರ ಸಿದ್ರಾಮಪ್ಪ ರಂಗಮಂದಿರಕ್ಕೆ ಭೂಮಿ ಪೂಜೆ | ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹಂದಿಗನೂರ ಸಿದ್ರಾಮಪ್ಪ ಅವರು ಸಿಂದಗಿ ತಾಲೂಕನ್ನು ರಾಜ್ಯಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟ ಮಹಾನ್ ಮೇರು ನಟ, ವರನಟ, ನಟಸಾರ್ವಭೌಮ ಡಾ.ರಾಜಕುಮಾರ ಅವರ ಸಮಾನರಾದ ಮಹಾನ್ ನಟ. ರಾಜ್ಯದಲ್ಲಿ ರಂಗಭೂಮಿಗೆ ಬುನಾದಿ ಹಾಕಿದ ಪ್ರಮುಖರಲ್ಲಿ ಹಂದಿಗನೂರ ಸಿದ್ರಾಮಪ್ಪ ಅವರು ಒಬ್ಬರು ಎಂದು ಜಾನಪದ ವಿದ್ವಾಂಸ ಡಾ.ಎಂ.ಎಂ.ಪಡಶೆಟ್ಟಿ ಹೇಳಿದರು.
ಸಿಂದಗಿ ಪಟ್ಟಣದ ಜಿ.ಪಿ.ಪೋರವಾಲ ಕಾಲೇಜಿನ ಎದುರುಗಡೆ ಇರುವ ಜಾಗೆಯಲ್ಲಿ ಸಿಂದಗಿ ಪುರಸಭೆ ಕಾರ್ಯಾಲಯ ವತಿಯಿಂದ ಮುಖ್ಯಮಂತ್ರಿ ಅಮೃತ ನಾಗರೋತ್ತಾನ ಯೋಜನೆ (ಹಂತ-೪) ವಿವೇಚನಾ ಅನುದಾನದಡಿಯಲ್ಲಿ ಮೊದಲನೇ ಹಂತದ ಹಂದಿಗನೂರ ಸಿದ್ರಾಮಪ್ಪ ಅವರ ರಂಗಮಂದಿರ ಭೂಮಿ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಂದಗಿ ತಾಲೂಕು ಹಂದಿಗನೂರ ಗ್ರಾಮದ ರಂಗಭೂಮಿ ಮೇರು ನಟ, ಕಲಾಸಾಮ್ರಾಟ, ನಟ ಭಯಂಕರ ಎಂದೇ ಪ್ರಖ್ಯಾತಿ ಹೊಂದಿದ್ದ ಹಂದಿಗನೂರ ಸಿದ್ರಾಮಪ್ಪನವರ ಹೆಸರಿನಲ್ಲಿ ಅವರು ಹುಟ್ಟುರಿನ ನೆಲದಲ್ಲಿ ಸ್ಮಾರಕ ರಂಗಮಂದಿರ ನಿರ್ಮಾಣವಾಗಬೇಕು ಎಂಬ ಕನಸನ್ನು ಗದಗ-ಡಂಬಳದ ತೋಂಟದಾರ್ಯ ಸಂಸ್ಥಾನಮಠದ ಲಿಂ.ತೋಂಟದ ಸಿದ್ಧಲಿಂಗ ಸ್ವಾಮೀಜಿಗಳು ಮತ್ತು ಸಂಶೋಧನಕಾರ ದಿ. ಡಾ.ಎಂ.ಎಂ.ಕಲಬುರ್ಗಿ ಕಂಡಿದ್ದರು. ಇದರ ಕುರಿತಾಗಿ ಈರ್ವರೂ ಹಲವು ಬಾರಿ ಪ್ರಯತ್ನ ಸಹ ಮಾಡಿದ್ದರು. ಅವರ ಕನಸನ್ನು ನನಸಾಗಿಸುವ ದಿಸೆಯಲ್ಲಿ ಇಂದು ಸರಕಾರ ಮಟ್ಟದಲ್ಲಿ ಈ ಕಾರ್ಯವಾಗುವ ಹಾಗೆ ಮಾಡಿದ ಸಿಂದಗಿ ಶಾಸಕರ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಶಾಸಕ ಅಶೋಕ ಮನಗೂಳಿ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿ, ತಾಲೂಕಿನ ಹೆಸರನ್ನು ರಾಷ್ಟ್ರ ಮಟ್ಟದ ಎತ್ತರಕ್ಕೆ ಕೊಂಡೊಯ್ದ ತಾಲೂಕಿನ ಹೆಮ್ಮೆಯ ಪುತ್ರ, ನಟ ಕೇಸರಿ, ರಂಗಭೂಮಿ ಕಲಾವಿದ ಹಂದಿಗನೂರ ಸಿದ್ದರಾಮಪ್ಪನವರ ರಂಗ ಮಂದಿರ ನಿರ್ಮಾಣವಾಗಬೇಕೆಂಬ ತೋಂಟದ ಸಿದ್ಧಲಿಂಗ ಶ್ರೀಗಳ ಬಯಕೆಗೆ ಇದೀಗ ಚಾಲನೆ ದೊರೆಯುತ್ತಿರುವುದು ಸಿಂದಗಿ ಸಾಂಸ್ಕೃತಿಕ ವಲಯಕ್ಕೆ ಹಾಗೂ ಹಂದಿಗನೂರ ಸಿದ್ದರಾಮಪ್ಪ ಅಭಿಮಾನಿಗಳಲ್ಲಿ ಅಪಾರ ಸಂತಸ ತಂದಿದೆ. ಎಲ್ಲರ ಕನಸಿನ ಕುಸಾದ ರಂಗಮಂದಿರದ ಕಟ್ಟಡವನ್ನು ಅತೀ ಶೀಘ್ರದಲ್ಲೇ ಸುಸಜ್ಜಿತ ಕಟ್ಟಡವಾಗಿ ಅನಾವರಣಗೊಳಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಎರಡನೆಯ ಹಂತದ ಕಾಮಗಾರಿಗೆ ಅನುದಾನವನ್ನು ಬೇಗನೆ ಬಿಡುಗಡೆಗೊಳಿಸುವಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.
ಪುರಸಭೆ ಮಾಜಿ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಈ ವೇಳೆ ಗುತ್ತಿಗೆದಾರ ಸಂಘದ ಅಧ್ಯಕ್ಷ, ಮುತ್ತು ಮುಂಡೇವಾಡಗಿ, ಸಾಯಬಣ್ಣ ಪುರದಾಳ, ಹಾಸಿಂಪೀರ ಆಳಂದ, ಸಿದ್ದು ಮಲ್ಲೇದ, ಶಿವಪ್ಪ ಗವಸಾನಿ, ಗುತ್ತಿಗೆದಾರ ಮುತ್ತು ಮಾಳೆಗಾರ, ಗ್ಯಾರಂಟಿ ಸಮಿತಿ ಸದಸ್ಯೆ ಸುನಂದಾ ಯಂಪುರೆ, ಕೆಡಿಪಿ ತಾಲೂಕು ಸದಸ್ಯೆ, ಮಹಾನಂದ ಬಮ್ಮಣ್ಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಮಹಿಳಾ ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ, ಅಜರ್ ನಾಟಿಕಾರ, ಗುರುಶಾಂತ ಬೂದಿಹಾಳ, ಶಿವಕುಮಾರ ಕಲ್ಲೂರ, ಗೊಲ್ಲಾಳಪ್ಪಗೌಡ ಬಿರಾದಾರ, ಶಾಂತು ರಾಣಾಗೋಳ, ಇರ್ಮಾನ ಗಣಿಹಾರ ಸೇರಿದಂತೆ ಅನೇಕರು ಇದ್ದರು. ಸಿದ್ದಲಿಂಗ ಚೌಧರಿ ಕಾರ್ಯಕ್ರಮ ನಿರ್ವಹಿಸಿದರು.

