ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಮಕ್ಕಳ ಸರ್ವಾಂಗೀಣ ಅಭವೃದ್ಧಿಗೆ ಪಠ್ಯಕ್ರಮದ ಜೊತೆ ಜೊತೆಗೆ ಅನುಭವಾಧಾರಿತ ಶಿಕ್ಷಣವೂ ಅತ್ಯಂತ ಮುಖ್ಯ ಎಂದು ಸಂಸ್ಥಾಪಕ ಎನ್.ಎಸ್.ಹಿರೇಮಠ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯ ಶಿರವಾಳ ಲೇಔಟ್ ನಲ್ಲಿರುವ ವಿದ್ಯಾಭಾರತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಪ್ರವಾಸದ ಬಳಿಕ ಅವರು ಮಾತನಾಡಿದರು.
ಇಂತಹ ಟ್ರಿಪ್ ಗಳ ಮೂಲಕ ಮಕ್ಕಳು ಪ್ರಕೃತಿ, ಸಮಾಜ ಹಾಗೂ ಜೀವನದ ವಾಸ್ತವಿಕತೆಯ ಬಗ್ಗೆ ಅನುಭವ ಪಡೆಯುತ್ತಾರೆ. ಪ್ರವಾಸಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ಸಹಕಾರ ಮನೋಭಾವ ಹಾಗೂ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುತ್ತವೆ. ಪಾಲಕರೂ ರಜಾ ದಿನಗಳಲ್ಲಿ ನಿಮ್ಮ ಮಕ್ಕಳನ್ನು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡಿಸುವಂತೆ ಸಲಹೆ ನೀಡಿದರು.
ನಸುಕಿನ ಜಾವ ಶಾಲಾ ಆವರಣದಿಂದಲೇ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ಸಾಹದಿಂದ ಹೊರಟ ಮಕ್ಕಳು ದಿನಪೂರ್ತಿ ಪ್ರವಾಸವನ್ನು ಆನಂದಿಸಿದರು. ಐತಿಹಾಸಿಕ ಸ್ಥಳಗಳಾದ ಐಹೊಳ್ಳಿ, ಪಟ್ಟದಕಲ್ಲು, ಬಾದಾಮಿ, ಬನಶಂಕರಿ, ಶಿವಯೋಗ ಮಂದಿರ, ಮಹಾಕೂಟ, ಸಿದ್ಧನಕೊಳ್ಳ ಪ್ರಕೃತಿ ಸೌಂದರ್ಯ ಹಾಗೂ ಸಾಂಸ್ಕೃತಿಕ ಮಹತ್ವದ ಸ್ಥಳಗಳ ಬಗ್ಗೆ ಶಾಲೆಯ ಬೋಧಕ ಸಿಬ್ಬಂದಿಗಳು ಮಾಹಿತಿ ನೀಡಿದರು.
ಪ್ರವಾಸದ ಸಂದರ್ಭದಲ್ಲೇ ಆಟಗಳು, ಗುಂಪು ಚಟುವಟಿಕೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಕ್ಕಳು ಅತ್ಯಂತ ಸಂತಸದಿಂದ ಭಾಗವಹಿಸಿದರು. ಶಿಕ್ಷಕರು ಮಕ್ಕಳಿಗೆ ಶಿಸ್ತು, ಸಹಕಾರ ಮತ್ತು ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು.
ಮಕ್ಕಳಿಗೆ ನೀಡಿದ ಊಟ ಹಾಗೂ ಉಪಹಾರ ವ್ಯವಸ್ಥೆಯೂ ಸಮರ್ಪಕವಾಗಿದ್ದು ಈ ರೀತಿಯ ಶಿಕ್ಷಣಾತ್ಮಕ ಪ್ರವಾಸಗಳು ಮಕ್ಕಳಲ್ಲಿ ಹೊಸ ಅನುಭವಗಳನ್ನು ನೀಡುವ ಜೊತೆಗೆ ಪಠ್ಯದ ಹೊರಗಿನ ಜ್ಞಾನವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಪೋಷಕರು ಹಾಗೂ ಶಿಕ್ಷಕರು ಪ್ರವಾಸ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರವಾಸದಲ್ಲಿ ಶಿಕ್ಷಕಿಯರಾದ ಸ್ವಾತಿ ಅಮರಣ್ಣವರ, ಅಲ್ಲಾಬಿ ಬಾಗೇವಾಡಿ, ಶಿವಮ್ಮ ಯರಝರಿ, ಬಸವರಾಜ ರೇವಡಿಹಾಳ ಸೇರಿದಮತೆ ಹಲವಾರು ಮಕ್ಕಳು ಭಾಗಿಯಾಗಿದ್ದರು.

