ದೇವರಹಿಪ್ಪರಗಿಯಲ್ಲಿ ಜರುಗಿದ ಕಿತ್ತೂರ ಚೆನ್ನಮ್ಮ ಜಯಂತ್ಯುತ್ಸವ & ಹಿಂದೂಗಳ ಸಂಸ್ಕೃತಿ ಸಮಾವೇಶದಲ್ಲಿ ಶಾಸಕ ಯತ್ನಾಳ ಕರೆ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಎಲ್ಲ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಜರುಗಿದ ಕಿತ್ತೂರ ಚೆನ್ನಮ್ಮನ ೨೦೧ನೇ ವಿಜಯೋತ್ಸವ ಹಾಗೂ ೨೪೭ನೇ ಜಯಂತ್ಯುತ್ಸವ, ಹಿಂದೂಗಳ ಸಂಸ್ಕೃತಿ ಸಮಾವೇಶ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದು ಮೀಸಲಾತಿ ವಿಷಯಕ್ಕೆ ಬಂದಾಗ ಸಣ್ಣ ಸಮುದಾಯಗಳು ಸಹ ಸೌಲಭ್ಯಗಳಿಂದ ವಂಚಿತವಾಗುತ್ತಿವೆ. ಅವುಗಳಿಗೂ ಸಹ ನ್ಯಾಯ ದೊರಕಬೇಕು. ಈಗ ನಮ್ಮ ಪಂಚಮಸಾಲಿ ಮೀಸಲಾತಿ ಹೋರಾಟಕ್ಕೂ ಒಂದು ದಿನ ಜಯ ದೊರೆಯುತ್ತದೆ. ಸಂಶಯ ಬೇಡ. ನಾವು ಇತಿಹಾಸ ಬಗ್ಗೆ ತಿಳಿಯಬೇಕಾಗಿದೆ. ಸ್ವಾತಂತ್ರ್ಯಕ್ಕಾಗಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ತಂಡದ ಹೋರಾಟ, ಸುಭಾಸ್‌ಚಂದ್ರ ಭೋಸ್‌ರ ತ್ಯಾಗವನ್ನು ಅರಿತು ಹಿಂದೂತ್ವದ ಮೂಲಕ ದೇಶ, ಸಂವಿಧಾನವನ್ನು ಪ್ರೀತಿಸಿ, ಗೌರವಿಸೋಣ ಎಂದರು.
ಶಾಸಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಮಾತನಾಡಿ, ಸಮುದಾಯದ ಋಣವನ್ನು ತೀರಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ. ಸಾಮಾಜಿಕ ನ್ಯಾಯ ಪರಿಕಲ್ಪನೆ ಮೇಲೆ ಇತರ ಸಮುದಾಯಗಳೊಂದಿಗೆ ಸುಂದರ ಸಂಬಂಧಭಾವ ಹೊಂದುವುದು ಅಗತ್ಯ ಎಂದರು.
ಸಿಂದಗಿ ಕ್ಷೇತ್ರದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಸಮುದಾಯದ ಮೀಸಲಾತಿಗೆ ಬೆಂಗಳೂರಿಗೆ ಪಾದಯಾತ್ರೆ ಮಾಡಿದ ಶ್ರೀಗಳ ಕಾರ್ಯ ಶ್ಲಾಘನೀಯ. ಸಮುದಾಯಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ಸಮುದಾಯ ದೊಡ್ಡದು ಎಂದರು.
ಸಾನಿಧ್ಯ ವಹಿಸಿದ್ದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಚೆನ್ನಮ್ಮಳ ಹೋರಾಟಕ್ಕೆ ಅಂದು ವೀರಶರಣ ಮಡಿವಾಳ ಮಾಚಿದೇವ ಸ್ಪೂರ್ತಿಯಾಗಿದ್ದು ಇಂಥ ನೆಲದಲ್ಲಿ ಸೇರಿದ ಪಂಚಮಸಾಲಿ ಸಮುದಾಯದ ಮೀಸಲಾತಿ ಉತ್ಸಾಹ ನ್ಯಾಯ ದೊರೆಯುವವರೆಗೆ ಬತ್ತದಿರಲಿ ಎಂದರು.
ಹಂಪಿಸಾವಿರದೇವರಮಠದ ವಾಮದೇವ ಮಹಾಂತಶ್ರೀ ಹಾಗೂ ಸಗರ ಒಕ್ಕಲಿಗರ ಹಿರೇಮಠದ ಮರುಳ ಮಹಾಂತಶ್ರೀ ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ ಮಾತನಾಡಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವೀರೇಶ ಕುದರಿ ಸ್ವಾಗತಿಸಿದರು. ನಂತರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ಸದಸ್ಯರಾದ ಕಾಸುಗೌಡ ಬಿರಾದಾರ, ರತ್ನಾಬಾಯಿ ದೇವೂರ, ಲಿಂಗಾಯತ ಪಂಚಮಸಾಲಿ ತಾಲ್ಲೂಕಾಧ್ಯಕ್ಷ ಗುರುರಾಜ ಆಕಳವಾಡಿ ಸೇರಿದಂತೆ ವಿವಿಧ ಸಮುದಾಯದ ಪ್ರಮುಖರು ಇದ್ದರು.
ನೂರಾರು ಕುಂಭಹೊತ್ತ ಮಹಿಳೆಯರು
ಸಮಾವೇಶದ ಅಂಗವಾಗಿ ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೂಡಲಸಂಗಮದ ಜಯ ಮೃತ್ಯುಂಜಯಶ್ರೀ ಹಾಗೂ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಭಾವಚಿತ್ರಗಳ ಮೆರವಣಿಗೆ ನೂರಾರು ಕುಂಭಹೊತ್ತ ಮಹಿಳೆಯರು ಹಾಗೂ ವಿವಿಧ ವಾದ್ಯಗಳೊಂದಿಗೆ ಜರುಗಿತು.

