ಇಬ್ರಾಹಿಂಪುರ : ಗಮನ ಸೆಳೆದ ಕುಂಭಮೇಳ
ವಿಜಯಪುರ: ಇಲ್ಲಿನ ಇಬ್ರಾಹಿಂಪುರದ ಐತಿಹಾಸಿಕ ಹಿರೇಬಾವಿ ಹತ್ತಿರವಿರುವ ಹಿರೇಮಠದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಲಿಂ. ಶ್ರೀ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ವೈಭವದಿಂದ ನಡೆಯಿತು.
ಈ ಬಾರಿ ಪುರಾಣ ಕಾರ್ಯಕ್ರಮ, ಕುಂಭ ಮೇಳವನ್ನು ಹಮ್ಮಿಕೊಳ್ಳುವ ಮೂಲಕ ಲಿಂ. ಶ್ರೀಗಳ 112 ನೇ ಪುಣ್ಯಾರಾಧನೆಯನ್ನು ವೈಶಿಷ್ಠ್ಯಪೂರ್ಣವಾಗಿ ಆಚರಿಸಲಾಯಿತು.
ಬೆಳಗಾವಿ ಜಿಲ್ಲೆ ಮಾಂಜರಿ(ಕೊಕಟನೂರ) ಕಾಡಸಿದ್ಧೇಶ್ವರ ಮಠದ ಶ್ರೀ 108 ಗುರುಶಾಂತಲಿಂಗ ಶಿವಾಚಾರ್ಯರು ಐದು ದಿನಗಳವರೆಗೆ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟು ಅಷ್ಟಾವರಣಗಳ ಬಗ್ಗೆ ಭಕ್ತರಿಗೆ ಮನಮುಟ್ಟುವಂತೆ ಹೇಳಿದರು.
ಪುರಾಣ ಮಂಗಲೋತ್ಸವದಂದು ಆಶೀರ್ವಚನ ನೀಡಿದ ಶ್ರೀಗಳು, ದುಶ್ಚಟಗಳನ್ನು ತೊರೆದು ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿ ಮುಂದೆ ಇನ್ನೆಂದೂ ದುಶ್ಚಟ ಮಾಡುವುದಿಲ್ಲ ಎಂದು ಮನಸಾಕ್ಷಿಯಾಗಿ ಹೇಳಿ ಅದರಂತೆ ನಡೆದುಕೊಳ್ಳಬೇಕು ಎಂದು ಶ್ರೀಗಳು ಭಕ್ತರಲ್ಲಿ ಮನವಿ ಮಾಡಿಕೊಂಡರು.
ತೆಲಸಂಗ ಹಿರೇಮಠದ ಶ್ರೀ ವೀರೇಶ ದೇವರು, ಆಶೀರ್ವಚನ ನೀಡಿ, ತಂದೆ-ತಾಯಿಗಳು ಬಾಲ್ಯದಿಂದಲೇ ಮನೆಯಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡುವ ಮೂಲಕ ಅವರ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.
ಪುಣ್ಯಾರಾಧನೆಯ ಅಂಗವಾಗಿ ಗುರುವಾರ ಬೆಳಿಗ್ಗೆ ಮಠದಲ್ಲಿ ಲಿಂ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಕುಂಭಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಮಸೂತಿಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮಿಗಳು ಈ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ದಿನ ಕುಂಭಮೇಳವನ್ನು ಆಯೋಜಿಸಲಾಗಿತ್ತು. ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ ಅವರು ಕುಂಭಮೇಳಕ್ಕೆ ಚಾಲನೆ ನೀಡಿದರು.
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ವಾದ್ಯಮೇಳದೊಂದಿಗೆ ಹೊರಟ ಕುಂಭಮೇಳದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಹಾಯ್ದು ಶ್ರೀಮಠ ತಲುಪಿ ಮುಕ್ತಾಯಗೊಂಡಿತು.
ವಿರೂಪಾಕ್ಷಿ ಹಿರೇಮಠ, ಪ್ರಭು ಹಿರೇಮಠ, ಉಮೇಶ ಹಿರೇಮಠ, ಮಹೇಶ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ಶರಣಯ್ಯ ಆಲಾಳಮಠ, ಗ್ರಾಮದ ಹಿರಿಯರಾದ ರೇವಣಸಿದ್ದಪ್ಪ ಜುಮನಾಳ, ರೇವಣಪ್ಪ ನುಚ್ಚಿ, ಗಿರಮಲ್ಲಪ್ಪ ನುಚ್ಚಿ, ಶಿವಪ್ಪ ಕೋವಳ್ಳಿ, ಬಸಪ್ಪ ಕೋವಳ್ಳಿ, ರುದ್ರಗೌಡ ಪಾಟೀಲ, ಮುರಗೇಶಗೌಡ ಪಾಟೀಲ, ಮುತ್ತುಗೌಡ ಪಾಟೀಲ, ನಂದಬಸು ಜುಮನಾಳ, ಕಾಂತಪ್ಪ ಹಳ್ಳಿ, ಯುವ ಮುಖಂಡರಾದ ಶಿವಾನಂದ ನುಚ್ಚಿ, ರೇವಣಕುಮಾರ ಬಗಲಿ, ರಮೇಶ ಜುಮನಾಳ, ಸಿದ್ದು ಕೋವಳ್ಳಿ, ಸಂಪತ್ ಕೋವಳ್ಳಿ, ಗಿರೀಶ ಕವಟಗಿ, ಪ್ರವೀಣ ಹಳ್ಳಿ, ಕಲ್ಲಪ್ಪ ಜುಮನಾಳ, ಗುರು ತುಪ್ಪದ, ನಿತಿನ ಹಳ್ಳಿ, ಸೇರಿದಂತೆ ಹಲವಾರು ಜನರು ಕುಂಭಮೇಳದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.