ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಸುಮಾರು 1040 ನೇ ಇಸವಿಯಲ್ಲಿನ ಶಾಸನ ಇಲ್ಲಿನ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಕೆಂಭಾವಿ ಎಂದರೇನೆ ಸಮಸಮಾಜದ ಕನಸು ಕಂಡ ಶರಣ ಭೋಗಣ್ಣ ಮತ್ತು ರಾಜಾ ಚಂದಿಮರಸನ ನೆನಪಾಗುತ್ತದೆ ಎಂದು ಹಿರಿಯ ಸಂಶೋಧಕಿ ಹನುಮಾಕ್ಷಿ ಗೋಗಿ ಹೇಳಿದರು.
ಪಟ್ಟಣದ ಭೋಗೇಶ್ವರ ದೇವಸ್ಥಾನಕ್ಕೆ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ನಿವೃತ್ತ ಮುಖ್ಯಸ್ಥರಾದ ಎಸ.ವಿ ವೆಂಕಟೇಶಯ್ಯ ನವರು ಹಾಗೂ ಸಂಶೋದಕಿ ಡಾ. ಕಾಶಿಬಾಯಿ ಭೊಗಶಟ್ಟಿ ರವರ ಸಮೇತ ಅವರ ತಂಡ ಸೋಮವಾರ ಭೇಟಿ ನಿಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಭೋಗಣ್ಣ ಬಸವಾದಿ ಪ್ರಮಥರ ಹಿರಿಯ ಸಮಕಾಲಿನವರಾಗಿದ್ದರು. ಆ ಕಾಲದಲ್ಲಿ ಭೋಗಣ್ಣ ಲಿಂಗಭೇದ ರಹಿತ, ಜಾತಿಭೇದ ರಹಿತ ಸಮಾಜವನ್ನು ನಿರ್ಮಾಣ ಮಾಡಲು ಹೋರಾಡಿದ ಮಹಾನ್ ಶರಣ ಎಂಬುವುದಾಗಿ ಐತಿಹಾಸಿಕವಾಗಿ ಕಾಣಬಹುದಾಗಿದೆ. ಕೆಂಭಾವಿ ಬೋಗಣ್ಣವರ ಹೆಸರು ಈ ಭೋಗೆಶ್ವರ ದೇವಾಸ್ಥಾನದಿಂದ ಬಂತೋ ಅಥವಾ ಭೋಗಣ್ಣನವರ ನಂತರ ದೇವಸ್ಥಾನ ರಚನೆಯಾತೊ ಮತ್ತು ಆತನ ವಚನಗಳ ಕುರಿತು ಸಂಶೋಧನೆಗಳು ನಡೆಯಬೇಕಾಗಿದೆ ಎಂಬ ಅಭಿಪ್ರಾಯ ಪಟ್ಟ ಅವರು ಭೋಗಣ್ಣನ ದೇವಸ್ಥಾನ ಅತ್ಯಂತ ಪ್ರಾಚೀನವಾದದ್ದು ಮತ್ತು ವಿಶಿಷ್ಠವಾದದ್ದಾಗಿದೆ ಎಂದು ತಿಳಿಸಿದರು.
ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ನಿವೃತ್ತ ಮುಖ್ಯಸ್ಥರಾದ ಎಸ.ವಿ ವೆಂಕಟೇಶಯ್ಯ ನವರು ಮಾತನಾಡಿ, ಕಲ್ಯಾಣಿ ಚಾಲುಕ್ಯರ ಕಾಲದ ದೇವಸ್ಥಾನ ಇದಾಗಿದೆ, 11 ನೇ ಶತಮಾನದಲ್ಲಿ ನಿರ್ಮಾಣವಾದ ಭೋಗಣ್ಣನ ದೇವಸ್ಥಾನ ಮೂಲ ಸ್ವರೂಪಕ್ಕೆ ತರುವ ಕೆಲಸವಾಗಬೇಕಾಗಿದೆ. ದೇವಸ್ಥಾನದ ಸುತ್ತುಲೂ ಇರುವ ಕಲ್ಯಾಣಿಯ ಹೂಳು ತೆಗೆದಾದಗ ಸಾಕಷ್ಟು ಕುರುಹುಗಳು ಸಿಗಬಹುದು, ಅವುಗಳನ್ನ ಆಧಾರವಾಗಿಟ್ಟುಕೊಂಡು ನಿರ್ಮಾಣ ಕಾರ್ಯ ಆಗಬೇಕು. ಸೌಂಧರ್ಯಕರಣ ಮಾಡಿದರೆ ಬಹು ದೊಡ್ಡ ಪ್ರವಾಸಿ ತಾಣ ವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಭೋಗೇಶ್ವರ ದೇವಸ್ಥಾನದ ವಿನ್ಯಾಸ ಎಲ್ಲಿಯೂ ನೋಡಲು ಸಿಗದ ವಿಶಿಷ್ಟ ವಿನ್ಯಾಸವಿದೆ. ಅಭಿವೃದ್ದಿ ಪಡಿಸಿದಾಗ ನಮ್ಮ ಪರಂಪರೆ ಬಗ್ಗೆ ಜಾಗೃತಿಯಾಗುತ್ತದೆ, ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂದ ಅವರು ಮುದನೂರು ಮತ್ತು ಏವೂರ ಸೇರಿದಂತೆ ಈ ತಾಣಗಳ ಅಭಿವೃದ್ಧಿಯಿಂದ ಈ ಭಾಗದಲ್ಲಿ ಒಂದು ಟೂರಿಜಂ ಸರ್ಕ್ಯೂಟ್ ಆಗಿ ನೋಡಬಹುದು ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ಸುಮಿತ್ರಪ್ಪ ಸಾಹು ಅಂಗಡಿ, ಶಾಂತರಡ್ಡಿ ಚೌದ್ರಿ ಮುದನೂರ, ಡಾ. ಬೋಗಪ್ಪ ಅಸ್ಕಿ, ರಾಜಶೇಖರ ಸ್ವಾಮಿ ಹಿರೇಮಠ, ಮೋಹನರಡ್ಡಿ ಡಿಗ್ಗಾವಿ, ಚನ್ನಯ್ಯ ಸ್ವಾಮಿ ಚಿಕ್ಕಮಠ, ಪುರಸಭೆ ಸದಸ್ಯ ಶರಣಪ್ಪ ಯಾಳಗಿ, ಸಂಗಣ್ಣ ಸಾಹು ತುಂಬಗಿ, ಮಲ್ಲಿಕಾರ್ಜುನ ಅಂಗಡಿ, ಗುರುಬಸಪ್ಪ ಕುಂಬಾರ, ಸೋಮನಗೌಡ ಪರಸನಳ್ಳಿ, ದೇವು ಹಡಪದ, ಗುರುರಾಜ ಅಂಗಡಿ, ಸೋಮು ಕುಂಬಾರ, ರೇವಣಸಿದ್ದ ಸೇರಿದಂತೆ ಹಲವರಿದ್ದರು.
“ಕೆಂಭಾವಿ ಭೋಗಣ್ಣನ ಕಾಲಮಾನ ಸುಮಾರು ಕ್ರಿ.ಶ. 1014 ರಿಂದ 1070 ಎಂದು ಅಂದಾಜಿಸಬಹುದಾಗಿದೆ. ಉಜ್ಜಯನಿಯಲ್ಲಿ ಭೋಗಾವತಿಪುರ ಇದೆ. ತೆಲಂಗಾಣ ಪ್ರದೇಶದಲ್ಲಿ ಉಜ್ಜಲ್ಲಿಯಲ್ಲಿಯ ಭೋಗಾವತಿ ಪುರದ ಗ್ರಾಮ ದೇವತೆ ಕೂಡ ಭೋಗೇಶ್ವರನಾಗಿದ್ದಾನೆ. ಕೆಂಭಾವಿ ಭೋಗಣ್ಣ ಘನ ವಿದ್ವಾಂಸನಾಗಿದ್ದನು, ಭೋಗಣ್ಣನ ಕುರಿತು ಮರಡಿಪುರ ಶಾಸನ, ಕುಣಿಲಮ್ ಗೆರೆ ಶಾಸನದಲ್ಲಿ ಉಲ್ಲೇಖ ಕಾಣಬಹುದಾಗಿದೆ ಭೋಗಣ್ಣನ 22 ಬೆಡಗಿನ ವಚನಗಳು ಸಿಕ್ಕಿವೆ, ಅನೇಕ ಶರಣರು ಕೆಂಭಾವಿ ಭೋಗಣ್ಣನ ಕುರಿತು ಕೊಂಡಾಡಿದ್ದು ನೋಡಬಹುದುದು. ಇಲ್ಲಿನ ದೇವಸ್ಥಾನ ಉತ್ಖನನ ಮಾಡುವುದು ಅವಶ್ಯವಿದೆ.”
– ಡಾ.ಕಾಶಿಭಾಯಿ ಭೋಗಶೆಟ್ಟಿ
ಸಂಶೋಧಕ ಸಾಹಿತಿಗಳು

