ರೈತರಿಗೆ ಸರಿಯಾಗಿ ಬೆಳೆ ಪರಿಹಾರ ಒದಗಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಡಚಣದಲ್ಲಿ ಪ್ರತಿಭಟನೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾಗೂ ಭೀಮಾ ನದಿ ಪ್ರವಾಹದಿಂದ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರದಿಂದ ರೈತರಿಗೆ ಬೆಳೆ ಪರಿಹಾರ ಸರಿಯಾಗಿ ತಲುಪುತ್ತಿಲ್ಲ ಕಾರಣ ರೈತರಿಗೆ ಸರಿಯಾಗಿ ಪರಿಹಾರ ಕಲ್ಪಿಸುವಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ತಹಶೀಲದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾಗೂ ಭೀಮಾ ನದಿ ಪ್ರವಾಹದಿಂದ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರದಿಂದ ಕೆಲ ರೈತರಿಗೆ ಅಲ್ಪ, ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ಬಂದಿದೆ. ಇನ್ನು ಅನೇಕ ರೈತರಿಗೆ ಪರಿಹಾರದ ಹಣ ಬಂದಿಲ್ಲ. ತಮ್ಮ ಇಲಾಖೆಯ ಸಿಬ್ಬಂದಿಗಳ ನಿರ್ಲಕ್ಷದಿಂದ ರೈತರ ಪರಿಹಾರ ಜಮೆ ಆಗುತ್ತಿಲ್ಲ. ಇನ್ನು 2024-25ನೇ ಸಾಲಿನ ದ್ರಾಕ್ಷಿ ಬೆಳೆಗಾರರ ಬೆಳೆ ವಿಮೆಯ ಹಣ ಕೂಡ ಬಂದಿರುವದಿಲ್ಲ ಎಂದ ಅವರು, ಪಟ್ಟಣದಲ್ಲಿ ಇರುವ ತಾಲೂಕಾ ಪಶು ಚಿಕಿತ್ಸಾಲಯದಲ್ಲಿನ ವೈದ್ಯರು ರೈತರ ಜಾನುವಾರುಗಳಿಗೆ ಸರಿಯಾಗು ಚುಚ್ಚುಮದ್ದು ಹಾಗೂ ಲಸಿಗೆ ನೀಡದೇ ರೈತರ ಜಾನುವಾರುಗಳು ಸಾವನ್ನಪ್ಪುತ್ತಿವೆ. ಇನ್ನು ರೈತರ ಸಾವನ್ನಪ್ಪಿದ ಜಾನುವಾರುಗಳಿಗೆ ಸರಕಾರದಿಂದ ಸಿಗುವ ಹಣ ಕೂಡ ಸಿಗುತ್ತಿಲ್ಲ. ಜಾನುವಾರುಗಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆಗೆ ಹೋದರೆ ಲಸಿಗೆ ಲಭ್ಯವಿಲ್ಲ, ನೀವು ಲಸಿಕೆಗಳನ್ನು ಹೊರಗಿನಿಂದ ತಂದರೆ ನಾವು ಲಸಿಕೆ ಹಾಕುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಾರೆ. ಇನ್ನು ರೈತರು ತಮ್ಮ ಜಾನುವಾರುಗಳಿಗೆ ಏನಾದರೂ ತೊಂದರೆಯಾದರೆ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದರೆ, ತಮ್ಮ ಜಮೀನಿಗೆ ಬಂದು ಚಿಕಿತ್ಸೆ ನೀಡಬೇಕಾದರೆ ರೂ. 100-500 ವರೆಗೆ ಕೊಡಬೇಕು ಎನ್ನುತ್ತಾರೆ. ರೈತರಿಗೆ ಇಷ್ಟೆಲ್ಲಾ ತೊಂದರೆ ಆದರೂ ಕೂಡಾ ಯಾವುದೇ ಸರಕಾರ ಅಥವಾ ಅಧಿಕಾರಿಗಳು ರೈತರ ತೊಂದರೆಗಳಿಗೆ ಕಿವಿ ಕೊಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಇನ್ನು ಪಟ್ಟಣದಲ್ಲಿ ಇರುವ ತಾಲೂಕಾ ಸಮುದಾಯ ಕೇಂದ್ರದಲ್ಲಿ ವೈದ್ಯರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಒಂದು ವೇಳೆ ಚಿಕಿತ್ಸೆ ನೀಡಿದರೂ ಔಷಧಿಗಳನ್ನು ಹೊರಗಿನಿಂದ ತರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಯಾವುದೇ ತರಹದ ಟೆಸ್ಟಿಂಗ್ ಮಾಡಿಸಬೇಕಾದರೆ, ಈ ಸೌಲಭ್ಯ ನಮ್ಮಲ್ಲಿ ಇರುವದಿಲ್ಲ, ನೀವು ಹೊರಗಡೆ ಟೆಸ್ಟಿಂಗ್ ಮಾಡಿ ರಿಪೋರ್ಟ ತಂದರೆ ನಾವು ಚಿಕಿತ್ಸೆ ನೀಡುತ್ತೇವೆ ಎಂದು ಹೇಳುತ್ತಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಅಶೋಕ ಮಾನೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಮಲ್ಲಿಕಾರ್ಜುನ ತೇಲಿ ಅವರನ್ನು ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾ ಸಂಚಾಲಕ ಮಹಾದೇವ ಬನಸೋಡೆ, ತಾಲೂಕಾ ಅಧ್ಯಕ್ಷ ವಸಂತ ಭೈರಾಮಡಿ, ಗೌರವಾಧ್ಯಕ್ಷ ಮುರುಗೇಂದ್ರ ಸಿಂಪಿ, ಗೇನಪ್ಪಾ ಬಿರಾದಾರ, ರೈತ ಮುಖಂಡರಾದ ಮಹಾದೇವ ಕರ್ಲಮಳ, ಮಂಜುಳಾ ಪೂಜಾರಿ, ಬಸಮ್ಮ ಬಾಲಗಾಂವ, ಚಂದ್ರಕಾಂತ ಸೋರೆಗಾಂವ, ದೇವೆಂದ್ರಪ್ಪಗೌಡ ಪಾಟೀಲ, ಬಾಪುರಾಯ ಬಿರಾದಾರ, ಸಂದೇಶ ಬನಸೋಡೆ, ಸಂಗಯ್ಯಾ ಕರ್ಜಗಿ, ಸೋಮಶೇಖರ ಪಟ್ಟಣಶೆಟ್ಟಿ ಸೇರಿದಂತೆ ನೂರಾರು ರೈತರು ಇದ್ದರು.
20ಸಿಡಿಎನ್1 : ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದ ಹಾಗೂ ಭೀಮಾ ನದಿ ಪ್ರವಾಹದಿಂದ ರೈತರ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಸರಕಾರದಿಂದ ರೈತರಿಗೆ ಬೆಳೆ ಪರಿಹಾರ ಸರಿಯಾಗಿ ತಲುಪುತ್ತಿಲ್ಲ ಕಾರಣ ರೈತರಿಗೆ ಸರಿಯಾಗಿ ಪರಿಹಾರ ಕಲ್ಪಿಸುವಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ತಹಶೀಲದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ, ತಹಶೀಲದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.

