ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುವ ವೈದ್ಯರು ಪ್ರೀತಿ ಮತ್ತು ಸಮಾಧಾನದಿಂದ ಮಾತನಾಡಿದರೆ ರೋಗಿಗಳು ಅರ್ಧ ಗುಣಮುಖರಾಗುತ್ತಾರೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ಸ್ನಾತಕೋತ್ತರ ವಿಭಾಗದ ಅಧ್ಯಕ್ಷ ಡಾ. ಸಿದ್ದನಗೌಡ ಎ. ಪಾಟೀಲ ಹೇಳಿದ್ದಾರೆ.
ಶನಿವಾರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ ಪ್ರಸಕ್ತ ವರ್ಷದ ಪದವಿ ಪ್ರದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಾಘ್ಭಟ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾಗಿದೆ. ರೋಗಿಗಳೊಂದಿಗೆ ಪ್ರೀತಿ ಮತ್ತು ಸಮಾಧಾನದಿಂದ ಮಾತನಾಡಿಸಿದರೆ ಅವರ ಅರ್ಧ ರೋಗ ಗುಣವಾಗುತ್ತದೆ. ಯುವ ವೈದ್ಯರು ವೈದ್ಯರು ಆರೋಗ್ಯ, ಸಮಯ ಹಾಗೂ ಅನುಭವಕ್ಕೆ ಯಾವಾಗಲು ಮಹತ್ವ ನೀಡಬೇಕು. ಈಗ ಪದವಿ ಪಡೆದಿರುವ ಯುವ ವೈದ್ಯರು ಸನ್ಮಾರ್ಗದಲ್ಲಿ ನಡೆಯುತ್ತ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ವಿ. ಕುಲಕರ್ಣಿ ಮಾತನಾಡಿ, ವೈದ್ಯ ವಿದ್ಯಾರ್ಥಿಗಳು ತಾವು ಕಲಿತ ಆಯುರ್ವೇದ ವೈದ್ಯ ಪದ್ಧತಿಯನ್ನೇ ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಮಾತೃ ವಿದ್ಯೆ ಮತ್ತು ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದು ಕರೆ ನೀಡಿದರು
ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಪದವಿ ಪ್ರಧಾನ ಸ್ವೀಕರಿಸಿದ ವೈದ್ಯರಿಗೆ ಚರಕ ಪ್ರತಿಜ್ಞಾವಿಧಿ ಭೋಧಿಸಿ ಅದನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು
ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಡಾ. ಶಶಿಧರ ನಾಯಕ, ಶೈಕ್ಷಣಿಕ ಸಂಯೋಜಕಿ ಡಾ. ಕಸ್ತೂರಿ ಪಾಟೀಲ, ಕಾಲೇಜಿನ ಬೋಧಕ, ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು.
ಇದೇ ವೇಳೆ ಗಣ್ಯರು ಮಹಾವಿದ್ಯಾಲಯದ ನಾನಾ ವಿಭಾಗಗಳ ಮುಂದಿನ ಐದು ವರ್ಷಗಳ ಗುರಿ ಸಾಧನೆಯ ಪಕ್ಷಿನೋಟದ ಕೈಪಿಡಿ ಗಮ್ಯ 2030 ಮತ್ತು ವಿದ್ಯಾಲಯದ 2026 ರ ಕಾರ್ಯಪಟ್ಟಿಯನ್ನು ಬಿಡುಗಡೆ ಮಾಡಿದರು. ಅಲ್ಲದೇ, ಅಧ್ಯಾಪಕರ ಬಳಗವು ಬರೆದ ನಾನಾ ಪುಸ್ತಕಗಳನ್ನು ಬಿಡುಗಡೆಮ ಮಾಡಲಾಯಿತು. ಪಿ. ಎಚ್. ಡಿ ಪದವಿ ಪಡೆದ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಒಟ್ಟು 55 ಪದವಿ, ಐದು ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು. ಬಿಎಎಂಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಡಾ. ಮೋಸಮಿ ಸಾಮಂತ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಡಾ. ಪೂರ್ಣಿಮಾ ಪಾಟೀಲ ಇವರಿಗೆ ನಗದು ಪುರಸ್ಕಾರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಪ್ರಾಚಾರ್ಯ ಡಾ. ಅಶೋಕ ಪಾಟೀಲ ಸ್ವಾಗತಿಸಿದರು. ಡಾ. ಮಾನಸಾ, ಡಾ. ಅನೀಸ್ ಮದನಿ ಹಾಗೂ ಡಾ. ಅನೀಸ್ ಮದನಿ ನಿರೂಪಿಸಿದರು.

