ಉದಯರಶ್ಮಿ ದಿನಪತ್ರಿಕೆ
ಚಡಚಣ: ಶಿಕ್ಷಕರ ಸೇವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಉದ್ದೇಶದಿಂದ ನನ್ನ ಮತಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾದ “ಗುರು ಸ್ಪಂದನ” ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಝಳಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಚಡಚಣ ತಾಲೂಕಿನ “ಗುರು ಸ್ಪಂದನ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರ ರಕ್ಷಕರಂತೆ ಸಮಾಜ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ ಎಂದರು.
ಗ್ರಾಮೀಣ ಭಾಗದ ಸರ್ಕಾರಿ ನೌಕರರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ವಿಜಯಪುರ ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಕರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂಬ ಅಸಮಾಧಾನವನ್ನೂ ಕೂಡಾ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ವ್ಯಕ್ತಪಡಿಸಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ನೌಕರರ ಸೇವಾ ಪುಸ್ತಕವು ಶಿಕ್ಷಕರ ಸಂವಿಧಾನಕ್ಕೆ ಸಮಾನವಾಗಿದ್ದು, ಅದರಲ್ಲಿ ಸಂಪೂರ್ಣ ಹಾಗೂ ಸರಿಯಾದ ಮಾಹಿತಿ ಇರಬೇಕು. ಶಿಕ್ಷಣ ಸಚಿವರ ಸಮ್ಮುಖದಲ್ಲಿಯೇ ಗ್ರಾಮೀಣ ನೌಕರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿ ಚಿದಾನಂದ ಕಟ್ಟಿಮನಿ, ಇಂಡಿ ಹಾಗೂ ನಾಗಠಾಣ ಶಾಸಕರ ಶಿಕ್ಷಣ ಮತ್ತು ಶಿಕ್ಷಕರ ಮೇಲಿನ ಅಪಾರ ಕಾಳಜಿ ಹಾಗೂ ಶಿಕ್ಷಕರ ಸಂಘದ ಸಹಕಾರದಿಂದ 2002ರಿಂದ ಬಾಕಿ ಉಳಿದಿದ್ದ ಎಲ್ಲ ಸೇವಾ ವಿವರಗಳನ್ನು “ಗುರು ಸ್ಪಂದನ” ಕಾರ್ಯಕ್ರಮದಲ್ಲಿ ಪರಿಹರಿಸಲಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್. ಸೊನ್ನಗಿ, ಶೀಘ್ರದಲ್ಲೇ ಶಿಕ್ಷಕರ ಸೇವಾ ಪುಸ್ತಕಗಳ ಸಂಪೂರ್ಣ ಡಿಜಿಟಲೀಕರಣ ನಡೆಯಲಿದ್ದು, ಶಿಕ್ಷಕರು ತಮ್ಮ ಸೇವಾ ಪುಸ್ತಕಗಳಲ್ಲಿ ಮಾಹಿತಿ ಸರಿಯಾಗಿರುವಂತೆ ಪರಿಶೀಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್.ಎಸ್. ಪಾಟೀಲ, ಶಿಕ್ಷಣ ಹಾಗೂ ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿರುವ ಇಬ್ಬರು ಶಾಸಕರು ಚಡಚಣ ತಾಲೂಕಿಗೆ ಶೀಘ್ರವೇ “ಗುರು ಭವನ” ನಿರ್ಮಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿದರು.
ಪ್ರಾಥಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವಂತ ಉಮರಾಣಿ ಮಾತನಾಡಿದರು.
ಶಿಕ್ಷಕ ಸುನೀಲ ಯಳಮೇಲಿ ಸ್ವಾಗತಿಸಿದರು. ಶಿಕ್ಷಕ ಗುರು ಜೇವೂರ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಮಜ್ಜಗಿ, ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಉಪಾಧ್ಯಕ್ಷ ಎಸ್.ಜೆ. ಪಾಟೀಲ, ವಿವಿಧ ಸಂಘಗಳ ಪದಾಧಿಕಾರಿಗಳು, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಾಘವೇಂದ್ರ ಕಾಪಸೆ, ಸಣ್ಣಪ್ಪ ತಳವಾರ, ನಾರಾಯಣ ಜಾಹಾಗಿರದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

