ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ನಿರ್ಧಾರ | ವಿಜಯಪುರ ಜಿಲ್ಲಾಧಿಕಾರಿ ಡಾ.ಆನಂದ ಕೆ. ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಸಲು ಕನಿಷ್ಠ ಬೆಂಬಲ ಬೆಲೆ ಕಾರ್ಯಪಡೆ ಸಮಿತಿ ಸಭೆಯಲ್ಲಿ ನಿರ್ಧರಿಸಿ, ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ನೊಂದಣಿ ಪ್ರಾರಂಭಿಸಿ, ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯ ೯೮ ಖರೀದಿ ಕೇಂದ್ರಗಳಲ್ಲಿ ತೊಗರಿ ಖರೀದಿಯನ್ನು ಪ್ರಾರಂಭಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಖರೀದಿ ಕೇಂದ್ರಗಳಲ್ಲಿ ಪ್ರತಿ ಕ್ವೀಂಟಲಿಗೆ ೮೦೦೦ ರೂ.ಗಳಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ ೪ ಕ್ವಿಂಟಲ್‌ನಂತೆ ಫ್ರುಟ್ ತಂತ್ರಾಂಶದಲ್ಲಿ ಲಭ್ಯವಾಗುವ ರೈತರು ತೊಗರಿ ಬೆಳೆದ ವಿಸ್ತೀರ್ಣಕ್ಕೆ ಅನುಗುಣವಾದ ಪ್ರಮಾಣದಲ್ಲಿ ತೊಗರಿಯನ್ನು ಖರೀದಿಸಲಾಗುತ್ತದೆ. ನೊಂದಣಿ ಕಾರ್ಯ ೮೦ ದಿನಗಳವರೆಗೆ ನಡೆಯಲಿದ್ದು, ಖರೀದಿ ಪ್ರಕ್ರಿಯೆ ೯೦ ದಿನಗಳವರೆಗೆ ನಡೆಯಲಿದೆ ಎಂದು ಅವರು ಹೇಳಿದರು.
ತೊಗರಿ ಖರೀದಿಯಲ್ಲಿ ಎಫ್‌ಎಕ್ಯೂ ಗುಣಮಟ್ಟ ಹಾಗೂ ಶೇ.೧೨ ರಷ್ಟು ತೇವಾಂಶ ಪರೀಕ್ಷೆ ಮಾಡಲಾಗುತ್ತದೆ, ಜಿಲ್ಲೆಯ ಗ್ರಾಮೀಣ ಭಾಗದ ರೈತರ ಅನುಕೂಲಕ್ಕಾಗಿ ಒಟ್ಟು ೯೮ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಎಲ್ಲ ರೈತರು ಖರೀದಿ ಕೇಂದ್ರಗಳ ಸ್ಥಳಗಳಲ್ಲಿ ನೊಂದಣಿ ಸಮಯದಲ್ಲಿ ಆಧಾರ ಕಾರ್ಡ, ಪಹಣಿ ಪತ್ರಿಕೆ, ಆಧಾರ ಲಿಂಕ್‌ವಾಗಿರುವ ರಾಷ್ಟ್ರೀಕೃತ ಬ್ಯಾಂಕಿನ್ ಪಾಸ್‌ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಶಾಖಾ ವ್ಯವಸ್ಥಾಪಕರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ವಿಜಯಪುರ (ಮೊ: ೭೮೯೨೦೯೫೧೭೬) ಹಾಗೂ ಆಯಾ ತಾಲೂಕಿನ ಎಪಿಎಂಸಿ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಶಿವಾನಂದ ಗೋಠೆ, ಸಹಕಾರ ಇಲಾಖೆ ಉಪ ನಿಬಂಧಕರಾದ ಎಸ್.ಕೆ.ಭಾಗ್ಯಶ್ರೀ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಯ ಜಿಲ್ಲಾ ವ್ಯವಸ್ಥಾಪಕ ಸಚಿನ ನಾಗಠಾಣ, ರಮೇಶ ದುಲಾರಿ ಇತರರು ಉಪಸ್ಥಿತರಿದ್ದರು.

