ಉದಯರಶ್ಮಿ ದಿನಪತ್ರಿಕೆ
ಚಡಚಣ: ಬಳ್ಳೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು ಮೊತ್ತ ಮಾಡಲಾದ ಮೂರು ರಸ್ತೆ ಕಾಮಗಾರಿಗಳಲ್ಲಿ ಕೇವಲ ಶೇ.5ರಷ್ಟು ಮಾತ್ರ ಕೆಲಸ ನಡೆಸಿ, ಉಳಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನು ಗ್ರಾಮದ ರೈತ ಕುಮಾರ ಜಾಧವ ಮಾಡಿದ್ದಾರೆ.
ಬಳ್ಳೊಳ್ಳಿ ಗ್ರಾಮ ಪಂಚಾಯತ್ ಅಡಿಯಲ್ಲಿ ವಿನೋದ್ ಗೋಡಿಹಾಳ ಜಮೀನಿಂದ ಸಾಯಬಗೌಡ ಹತ್ತಿ ಜಮೀನಿನವರೆಗೆ ಮುರುಮ ರಸ್ತೆ ಕಾಮಗಾರಿ (ಕಾಮಗಾರಿ ಸಂಖ್ಯೆ: 1507003034/ಆರ್.ಸಿ/93393042892515995), ಬಳ್ಳೊಳ್ಳಿಯಿಂದ ದೇವರನಿಂಬರಗಿ ರಸ್ತೆಯ ಪುರಾಣಿಕ ಹೊಲದಿಂದ ಅಪ್ಪಾಶ್ಯಾ ಬಿರಾದಾರ ಹೊಲದವರೆಗೆ ರಸ್ತೆ ನಿರ್ಮಾಣ ಕಾಮಗಾರಿ (1507003034/ ಆರ್.ಸಿ//93393042892515837) ಹಾಗೂ ಕದರಿ ಮಹಾದೇವ ವಸತಿಯಿಂದ ತೇಲಿ ವಸ್ತಿ ರಸ್ತೆ ಕಾಮಗಾರಿ (1507003034/ ಆರ್.ಸಿ//93393042892517645) ಈ ಮೂರು ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕೆಲಸ ಮಾಡಿ ಹಣ ದೋಚಿದ್ದು ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್‌ಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ರಸ್ತೆ ಕಾಮಗಾರಿ ಹಾಗೂ ಹೂಳೆತ್ತುವ ಕೆಲಸಗಳ ಸಂಪೂರ್ಣ ಸ್ಥಿತಿಯನ್ನು ವಿಡಿಯೋ ಮೂಲಕ ದಾಖಲು ಮಾಡಿ ಸಂಬಂಧಪಟ್ಟ ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಮುಂದುವರೆದು 15ನೇ ಹಣಕಾಸು ಆಯೋಗದ ಅನುದಾನದಡಿ ನಡೆದ ಬಹುತೇಕ ಎಲ್ಲಾ ಕಾಮಗಾರಿಗಳಲ್ಲೂ ಕಳಪೆ ಕೆಲಸ ಮಾಡಲಾಗಿದೆ. ಆದ್ದರಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಎದುರಲ್ಲೇ ಸ್ಥಳ ಪರಿಶೀಲಿಸಿ, ಸಭೆ ನಡೆಸಿ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬಳ್ಳೋಳ್ಳಿಯ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸದೆ, ಲಾಡ್ಜ್ ಹಾಗೂ ಹೋಟೆಲ್‌ಗಳಲ್ಲಿ ಕುಳಿತು ಕೆಲಸ ಮಾಡುತ್ತಿರುವುದು ಯಾವ ನಿಯಮದಡಿ ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಹಾಗಿದ್ದರೆ ಗ್ರಾಮ ಪಂಚಾಯತ್ ಕಚೇರಿ ನಿರ್ಮಾಣದ ಅವಶ್ಯಕತೆಯೇನು ಎಂಬ ಪ್ರಶ್ನೆ ಎದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಕಂಪ್ಯೂಟರ್ ಆಪರೇಟರನ್ನು ಕೂಡಲೇ ಬದಲಾಯಿಸಿ, ಎಲ್ಲಾ ಕಾಮಗಾರಿಗಳ ಬಗ್ಗೆ ಮೇಲಾಧಿಕಾರಿಗಳು, ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಿ ಗ್ರಾಮದಲ್ಲಿ ಸಭೆ ನಡೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.

