ಉದಯರಶ್ಮಿ ದಿನಪತ್ರಿಕೆ
ಚಡಚಣ: ಅನ್ನ ನೀಡುವ ಭೂತಾಯಿಗೆ ಹಾಗೂ ಹೊಲದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಬೆಳೆಗೆ ಮನೆಮಂದಿಯಲ್ಲ ಸೇರಿ ಸಂಭ್ರಮದಿಂದ ಪೂಜೆಸಲ್ಲಿಸುವ ವಾಡಿಕೆ ಹಿಂದಿನಿಂದ ಬಂದಿದೆ. ಉತ್ತರ ಕರ್ನಾಟಕದ ರೈತರ ಪಾಲಿಗೆ ಸಂಭ್ರಮದ ಹಬ್ಬ. ಎಳ್ಳ ಅಮವಾಸ್ಯೆಯ ನಿಮಿತ್ತ ಚಡಚಣ ತಾಲೂಕಿನಾದ್ಯಂತ ಹಾಗೂ ರೇವತಗಾಂವ ಗ್ರಾಮದ ಕೆಂಬತ್ತಿ ವಸ್ತಿಯಲ್ಲಿನ ರೈತ ಮಹಿಳೆಯರು ಶುಕ್ರವಾರದಂದು ಭೂತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ಮುತ್ತ್ಯೈದೆಯರಿಗೆ ಉಡಿ ತುಂಬುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಅತಿವೃಷ್ಟಿಯಿಂದ ಮುಂಗಾರು ಬಹುತೇಕ ಹಾಳಾಗಿದ್ದು ಹಿಂಗಾರಿ ಚನ್ನಾಗಿ ಬೆಳದು ನಿಂತಿರೋ ಜೋಳ, ಕಡಲೆ ಸೇರಿದಂತೆ ಹಿಂಗಾರು ಬೆಳೆಯಲ್ಲಿ ಐದು ಕಲ್ಲಿನ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಸಜ್ಜಿ ರೊಟ್ಟಿ ಚವಳಿಕಾಯಿ ಚಾಂಗಬಲೋ’ ಎಂದು ಹೇಳುತ್ತ ಹೊಲದ ತುಂಬ ಭೂತಾಯಿಗೆ ಚರಗ ಚೆಲ್ಲಿದರು.ಚರಗ ಚೆಲ್ಲಿದ ಅನ್ನ ಆಹಾರ ತಿನ್ನಲು ಬರುವ ಪಕ್ಷಿಗಳು ಹೊಲದಲ್ಲಿರುವ ಕೀಟಗಳನ್ನು ತಿಂದು ರೈತರಿಗೆ ಸಹಾಯಮಾಡುತ್ತವೆ. ಚಡಚಣ ತಾಲೂಕಿನ ಪ್ರತಿ ಮಹಿಳೆಯರು ತಮ್ಮ ಮನೆಗಳಲ್ಲಿ ತಯಾರಿಸಿದ ಸಜ್ಜೆ ಕಡಬು, ಹೋಳಿಗೆ, ಹಸಿ ಮೆಣಸಿನಕಾಯಿ ಚೆಟ್ನಿ, ಭರ್ತ, ವಿವಿಧ ಬಗೆಯ ಪಲ್ಯಯಿಂದ ತಯಾರಿಸಿ ಗರಗಟ ಸೇರಿದಂತೆ ಇತರ ವಿಶೇಷ ಭೋಜನವನ್ನು ಭೂತಾಯಿಗೆ ಅರ್ಪಿಸುತ್ತಾರೆ.
ಚರಗ ಚೆಲ್ಲುವ ಸಂಭ್ರಮ ಮುಗಿದ ನಂತರ ತುಂಬಿದ ಹೊಲದ ಮಧ್ಯ ಮುತ್ಯೈದೆಯರ ಊಟವಾದ ಮೇಲೆ ಎಲ್ಲರೂ ಸಹ ಭೋಜನವನ್ನು ಸವಿದರು. ಸ್ವಲ್ಪ ಹೊತ್ತು ಹೊಲದಲ್ಲಿ ವಿಶ್ರಾಂತಿ ಕಳೆದು ಸಂಜೆ ವೇಳೆಗೆ ಮನೆಗೆ ಮರಳಿದರು.
ರೇವತಗಾಂವ ಗ್ರಾಪಂ ಸದಸ್ಯೆ ಲಕ್ಷ್ಮೀಬಾಯಿ ಮಾಳಿಯವರು ಮಾತನಾಡುತ್ತ. ‘ನಾಲ್ಕು ದಿಕ್ಕುಗಳಿಗೂ ಚರಗ ಚೆಲ್ಲುವುದು ಸಮೃದ್ಧ ಫಸಲು ಬೆಳೆಯಲಿ, ಬೆಳೆಗೆ ಯಾವುದೇ ರೋಗ ತಗುಲದೆ ಒಳ್ಳೆಯ ಇಳುವರಿ ಬರಲಿ ಎಂಬ ಆಶಯದೊಂದಿಗೆ ಕೃಷಿಕರು ಭೂಮಿತಾಯಿಗೆ ಅರ್ಪಿಸುವ ನೈವೇದ್ಯವೇ ಚರಗವಾಗಿದೆ’ ಎಂದು ಹೇಳಿದರು.

