ಬಂಥನಾಳ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ ಶಿಕ್ಷಕರಿಗೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಂಥನಾಳದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಅವರು ಬುಧವಾರ ಭೇಟಿ ನೀಡಿ, ವಸತಿ ಶಾಲೆಯ ನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಬಳಿಕ ಶಿಕ್ಷಕರೊಂದಿಗೆ ಸಭೆ ನಡೆಸಿದ ಅವರು, ಪಾಠ ಭೋಧನೆ ಪೂರ್ವದಲ್ಲಿ ಸಂಬಂಧಿಸಿದ ವಿಷಯದ ಬಗ್ಗೆ ಪಾಠ ಯೋಜನೆಯನ್ನು ಸಿದ್ದಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಮನ-ಮುಟ್ಟುವಂತೆ ಪಾಠ ಮಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯ ೨೯ ಅಂಶಗಳನ್ನು ಪರಿಪಾಲನೆ ಮಾಡುವುದರೊಂದಿಗೆ ನೀಲನಕ್ಷೆ ತಯಾರಿಸಿಕೊಂಡು ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ನೀಡಿ ವಿಷೇಷ ತರಗತಿಗಳನ್ನು ಏರ್ಪಡಿಸಿ, ಗುಣಾತ್ಮಕ ಹಾಗೂ ಪರಿಮಣಾತ್ಮಕ ಭೋಧನೆ ಮಾಡಿ ಮೂರು ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅಣಿಗೊಳಿಸಬೇಕೆಂದು ಮಾರ್ಗದರ್ಶನ ಮಾಡಿದರು. ವಸತಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ನಾವೆಲ್ಲರೂ ಅತ್ಯಂತ ಕಳಕಳಿಯಿಂದ ಕರ್ತವ್ಯ ನಿರ್ವಹಿಸಬೇಕು.ವಸತಿ ನಿಲಯದ ಸ್ನಾನದ ಕೊಠಡಿ ಹಾಗೂ ಶೌಚಾಲಯಗಳ ದುರಸ್ತಿಗಾಗಿ ಮತ್ತು ಹೆಚ್ಚುವರಿ ಸ್ನಾನಗೃಹ ಶೌಚಾಲಯಗಳ ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಪ್ರಾಚಾರ್ಯರಿಗೆ ಸೂಚಿಸಿದರು.
ಇದಕ್ಕೂ ಮೊದಲು ಮದಭಾವಿಯ ಸಮುದಾಯ ಭವನದ ಕಟ್ಟಡದ ಕಾಮಗಾರಿ, ತಾಂಬಾ ಗ್ರಾಮದ ಪ್ರಗತಿ ಕಾಲೊನಿಗೆ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಇಂಗಳಗಿ ಗ್ರಾಮಕ್ಕೆ ಭೇಟಿ ನೀಡಿ ಡಾ|| ಬಾಬು ಜಗಜೀವನ ರಾಂ ಭವನದ ನಿವೇಶನದ ಕುರಿತು ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಿದರು. ಕಗ್ಗೋಡ ಹಾಗೂ ಶಿವಣಗಿ ಗ್ರಾಮದ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ, ವಸತಿ ನಿಲಯಗಳ ನಿರ್ವಹಣೆ ಕುರಿತು ಅಲ್ಲಿನ ಸಿಬ್ಬಂದಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

“ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ಸರ್ಕಾರ ನಿಗದಿಪಡಿಸಿರುವ ಮೆನು ಚಾರ್ಟ ಪ್ರಕಾರ ರುಚಿ-ಶುಚಿಯಾದ ಗುಣಮಟ್ಟದ ಆಹಾರ ನಿಗದಿತ ಸಮಯಾನುಸಾರ ಒದಗಿಸಲಾಗುತ್ತಿದ್ದು, ಪ್ರಾಚಾರ್ಯರು ಹಾಗೂ ನಿಲಯಪಾಲಕರು ಯಾವುದೇ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಬೇಕಲ್ಲದೆ, ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು.”
– ಮಹೇಶ ಪೋತದಾರ
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು, ವಿಜಯಪುರ

