ಉದಯರಶ್ಮಿ ದಿನಪತ್ರಿಕೆ
ಚಡಚಣ: ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಕಳ್ಳತನ ಹಾಗೂ ಖದೀಮರ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಝಳಕಿ ಠಾಣೆ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಝಳಕಿ ಠಾಣೆ ಪೊಲೀಸ್ ಉಪನಿರೀಕ್ಷಕ ಮಂಜುನಾಥ ತೀರಕನ್ನವರ ತಿಳಿಸಿದ್ದಾರೆ.
ಗ್ರಾಮಸ್ಥರು ತಮ್ಮ ಚಿನ್ನಾಭರಣ, ಹಣ ಹಾಗೂ ಅಮೂಲ್ಯ ವಸ್ತುಗಳನ್ನು ಬ್ಯಾಂಕ್‌ನಲ್ಲಿ ಅಥವಾ ಮನೆಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಕೇವಲ ಪೊಲೀಸ್ ಇಲಾಖೆ ಎಲ್ಲದಕ್ಕೂ ಹೊಣೆ ಎಂಬ ಮನೋಭಾವ ಬಿಟ್ಟು,ಯಾವುದೇ ಸಂದರ್ಭದಲ್ಲಿಯು ನಮ್ಮ ಪೋಲೀಸ್ ಇಲಾಖೆ ನಿಮ್ಮೊಂದಿಗೆ ಸದಾ ಇರುತ್ತೆವೆ ಮತ್ತು ಸಾರ್ವಜನಿಕರ ಸಹಕಾರವೂ ಅತೀ ಅಗತ್ಯವಾಗಿದೆ ಎಂದು ಅವರು ಹೇಳಿದರು.
ಮೇಲಾಧಿಕಾರಿಗಳ ಆದೇಶದಂತೆ ಪ್ರತಿಯೊಂದು ಗ್ರಾಮಕ್ಕೂ ಒಬ್ಬರಂತೆ ಬೀಟ್ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು, ಅವರು ರಾತ್ರಿ ವೇಳೆಯಲ್ಲಿ ಗ್ರಾಮಗಳ ಪ್ರಮುಖ ಪ್ರದೇಶಗಳಲ್ಲಿ ಗಸ್ತು ತಿರುಗಲಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ನಮ್ಮ ಸಿಬ್ಬಂಧಿಯವರಿಗೆ ಸಹಕರಿಸುವಂತೆ ಮನವಿ ಮಾಡಿದರು.
ಕಳ್ಳರು ಯಾವುದೇ ರೂಪದಲ್ಲಿ ಬರಬಹುದು ಮಿಕ್ಸರ್ ರಿಪೇರಿ, ಚೈನ್ ರಿಪೇರಿ, ಗ್ಯಾಸ್ ರಿಪೇರಿ ಸೇರಿದಂತೆ ವಿವಿಧ ನೆಪಗಳಿಂದ ಗ್ರಾಮಗಳಿಗೆ ಬರುವ ಅನ್ಯ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅವರ ಹಾವಭಾವ ಸಂಶಯಾಸ್ಪದವಾಗಿ ಕಂಡುಬಂದಲ್ಲಿ ತಕ್ಷಣವೇ ಝಳಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ರಾತ್ರಿ ಸಮಯದಲ್ಲಿ ಯಾವುದೇ ವ್ಯಕ್ತಿಗಳಿಂದ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ತಿಳಿಸಬೇಕೆಂದರು. ಕಳ್ಳರು ಮಾರಕಾಸ್ತ್ರಗಳನ್ನು ಬಳಸುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಹೆಚ್ಚು ಜಾಗರೂಕರಾಗಿರಬೇಕು. ಅಗತ್ಯವಿದ್ದಲ್ಲಿ ಕೂಗಿ ಸುತ್ತಮುತ್ತಲಿನ ಜನರಿಗೆ ಮಾಹಿತಿ ನೀಡುವಂತೆ ಅವರು ಪ್ರಕಟಣೆಯ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

