ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪುರಸಭೆಯ ಸಾಮನ್ಯ ಸಭೆಯು ಪ್ರಮುಖ ನಿರ್ಧಾರ ಕೈಗೊಳ್ಳುವ ವೇದಿಕೆಯಾಗಿದೆ. ಪಟ್ಟಣದ ಅಭಿವೃದ್ಧಿ ಹಾಗೂ ಮೂಲಭೂತ ಸೌಲಭ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತಿ ವಾರ್ಡ್ನಲ್ಲಿರುವ ಸಮಸ್ಯೆಗಳ ಬಗ್ಗೆ ಎಲ್ಲಾ ಸದಸ್ಯರು ಪ್ರಸ್ತಾವನೆ ಸಲ್ಲಿಸಿ ಚರ್ಚೆ ಮಾಡಬೇಕು ಎಂದು ಪುರಸಭೆ ಅಧ್ಯಕ್ಷೆ ಪ್ರೀಯಾ ರಾಮನಗೌಡ ಪೋಲೀಸ್ ಪಾಟೀಲ್ ಹೇಳಿದರು.
ಬುಧವಾರ ಜರುಗಿದ ಪುರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಶೌಚಾಲಯಗಳ ಬಗ್ಗೆ, ಪಟ್ಟಣದ ಅಭಿವೃದ್ಧಿ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿವೆ, ಹಲವಾರು ಕಡೆ ಚರಂಡಿ ಸಮಸ್ಯೆ, ನೀರಿನ ಸಮಸ್ಯೆ ಇದ್ದು. ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ದೂರುಗಳ ಬರದಂತೆ, ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದವರು. ಆಯಾಯ ವಾರ್ಡ್‌ಗಳಿಂದ ಚುನಾಯಿತರಾದ ಪ್ರತಿನಿಧಿಗಳು ತಮ್ಮ ವಾರ್ಡ್‌ನ ಸಮಸ್ಯೆಗಳನ್ನು ಮಂಡಿಸಬೇಕು. ಸಭೆಯ ಕಾರ್ಯದರ್ಶಿ ಪುರಸಭೆ ಮುಖ್ಯಾಧಿಕಾರಿಗಳು, ನಿರ್ಣಯಗಳ ಕೈಗೊಳ್ಳುವು ಮೂಲಕ ಜಾರಿಗೆ ಬರುವಂತೆ ಕ್ರಮವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಮುಖ್ಯಾಧಿಕಾರಿ, ಪುರಸಭೆ ಸಿಬ್ಬಂದಿಗಳು, ಸೇರಿದಂತೆ ಇಂಜಿನಿಯರ್ ಉಪಸ್ಥಿತರಿದ್ದರು.
” ಪುರಸಭೆಯ ಜೆಸಿಬಿ ಯಂತ್ರವನ್ನು ನಿರ್ವಹಣಾ ಮಾಡಲು ಸಾಕಷ್ಟು ಹಣವನ್ನು ಮೀಸಲಿಟ್ಟು ಹಣ ದುರ್ಬಳಕೆ ಆಗುತ್ತಿದೆ. ವಿಮೆ ಇಲ್ಲದ ಜೆಸಿಬಿ ಯಂತ್ರಗಳನ್ನು ತಾವು ರಸ್ತೆಗೆ ತಂದಿದ್ದೀರಿ .ಇಂದು ಜೆಸಿಬಿ ಯಂತ್ರ ಕಾಣ್ತಿಲ್ಲ. ಇದರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಅನವಶ್ಯಕ ಹಣ ಪೋಲು ಆದರೆ ತಾವು ಪೂರ್ತಿ ಲೆಕ್ಕ ಕೊಡಲು ಸಿದ್ಧರಿರಬೇಕು.”
– ರಮ್ಯಾ ರಾಘವೇಂದ್ರ ದೇಶಪಾಂಡೆ
ಪುರಸಭೆ ಸದಸ್ಯರು, ವಾರ್ಡ್ ನಂ. 05
“ಕುಡಿಯುವ ನೀರಿನ ಜೆಜೆಎಂ ಕಾಮಗಾರಿಯಿಂದಾಗಿ ನಮ್ಮ ಏರಿಯಾದಲ್ಲಿ ನೀರು ಬರುತ್ತಿಲ್ಲ, ಇದರ ಬಗ್ಗೆ ನಮಗೆ ಮಾಹಿತಿ ನೀಡಬೇಕು. ಹಾಗೆ ರಸ್ತೆ ಹಾಳಾಗಿ ದೂಳು ಎಲ್ಲೆಂದರಲ್ಲಿ ಬರುತ್ತಿದೆ. ಡಿಸೆಂಬರ್ ಕೊನೆಯ ತಿಂಗಳಿಗೆ ಬಂದಿದ್ದೇವೆ, ಇನ್ನೂ ಜೆಜೆಎಂ ಕೆಲಸ ಮುಗಿದಿಲ್ಲ. ಪ್ರತಿ ಮನೆಗೆ ಮನೆಗೆ ನೀರು ಬರುವಂತೆ ಕ್ರಮ ಕೈಗೊಳ್ಳಿ.”
– ರವಿಶಂಕರ ಸೊನ್ನದ
ಪುರಸಭೆ ಸದಸ್ಯರು, ವಾರ್ಡ್ ನಂ. 03

