ವಿಜಯಪುರ: ಜಿಲ್ಲೆಯ ನಾಗರಿಕರಿಗೆ ಒದಗಿಸಬೇಕಾದ ಸೇವೆಗಳು, ಸಕಾಲದ ಹಿನ್ನಲೆ ಉದ್ದೇಶ, ಸಕಾಲ ಕಾಯ್ದೆ ಅಧಿನಿಯಮ ಕುರಿತ ಸಂಪೂರ್ಣ ಮಾಹಿತಿ ಬಗ್ಗೆ ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಕಾಲ ಅರಿವು-ಹರಿವು ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು, ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸುವ ಸಾರ್ವಜನಿಕರಿಗೆ ಜಿಲ್ಲೆಯಲ್ಲಿ ಸ್ಥಾಪಿತವಾದ ಗ್ರಾಮ್ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳು ಸದುಪಯೋಗವಾಗಬೇಕು. ಗ್ರಾಮ ಒನ್ ಕೇಂದ್ರ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ, ಸಂವಹನ ಹಾಗೂ ತಾಳ್ಮೆಯಿಂದ ಇದ್ದು, ಅತ್ಯಂತ ಸಮಯಪ್ರಜ್ಞೆ, ಪ್ರಾಮಾಣಿಕತೆ, ಶಿಸ್ತಿನಿಂದ ಕಾರ್ಯನಿರ್ವಹಿಸಿ, ಅಗತ್ಯವಿರುವ ಮಾಹಿತಿ ಒದಗಿಸಲು ಪ್ರಯತ್ನಿಸಬೇಕು. ಕಾನೂನಿನಲ್ಲಿರುವ ನಿಯಮಗಳನ್ನು ಪಾಲಿಸಿ, ತಮ್ಮ ಅಧಿಕಾರವನ್ನು ಗೌರವಿಸಿ, ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಲ್ಲಿರುವ ಸೂಚನೆಯ ಮಾರ್ಗದರ್ಶನದಂತೆ ಜಿಲ್ಲೆ ಹಾಗೂ ಗ್ರಾಮಗಳಲ್ಲಿರುವ ಎಲ್ಲ ಗ್ರಾಮ ಒನ್ ಕೇಂದ್ರಗಳು ಮತ್ತು ಕರ್ನಾಟಕ ಕೇಂದ್ರಗಳು ನಾಗರೀಕರಿಂದ ಸ್ವೀಕರಿಸುವ ಅರ್ಜಿಗಳಿಗೆ ನಿಗದಿತ ಶುಲ್ಕ ಮಾತ್ರ ಪಡೆದುಕೊಳ್ಳಬೇಕು. ಹೆಚ್ಚಿನ ಶುಲ್ಕ ಪಡೆದಲ್ಲಿ ಕೇಂದ್ರಗಳ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಅಧಿಕಾರಿಗಳು ಕಾಲಕಾಲಕ್ಕೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪರಿಶೀಲನೆ ಮಾಡದೇ ವಿನಾಕಾರಣ ತಿರಸ್ಕರಿಸಲು ಅನುಮತಿ ನೀಡಬಾರದು. ಜಿಲ್ಲೆಯ ಪ್ರತಿಯೊಂದು ಕೇಂದ್ರಗಳ ಕಾರ್ಯವೈಖರಿಗಳ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಸಕಾಲ ಯೋಜನೆಯಡಿ ಸರಕಾರದ ಪ್ರತಿಯೊಂದು ಯೋಜನೆಗಳು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ಗುರಿ ಹೊಂದಿದ್ದು, ಸಕಾಲ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳು ನಿಗದಿತ ಕಾಲಮಿತಿಯಲ್ಲಿ ಸಕಾಲ ಸೇವೆ ಒದಗಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ ಕಲಘಟಗಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಸಂಪತ್ ಗುಣಾರಿ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ ತರಬೇತಿ ನೀಡಿದರು.
Related Posts
Add A Comment